ADVERTISEMENT

ಕೈತಪ್ಪಿದ ಚಿನ್ನ; ಮಹಿಳಾ ಕ್ರಿಕೆಟಿಗರಿಗೆ ಕಾಮನ್‌ವೆಲ್ತ್ ಕಲಿಸಿದ ಪಾಠ

ಪಿಟಿಐ
Published 9 ಆಗಸ್ಟ್ 2022, 5:21 IST
Last Updated 9 ಆಗಸ್ಟ್ 2022, 5:21 IST
ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತ ತಂಡ  –ಪಿಟಿಐ ಚಿತ್ರ
ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತ ತಂಡ  –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್: ಭಾರತ ಮಹಿಳಾ ಕ್ರಿಕೆಟ್ ತಂಡದ ಆಗಾರ್ತಿಯರು ತಮ್ಮ ಕೊರಳಲ್ಲಿದ್ದ ಬೆಳ್ಳಿ ಪದಕಗಳನ್ನು ಪದೇ ಪದೇ ಸ್ಪರ್ಶಿಸಿ ಪುಳಕಿತರಾದರು. ಅದರ ಹಿಂದೆಯೇ ‘ಸ್ವಲ್ಪ ತಾಳ್ಮೆಯಿಂದ ಆಡಿದ್ದರೆ ಚಿನ್ನದ ಪದಕ ನಮ್ಮದಾಗುತ್ತಿತ್ತು’ ಎಂಬ ಭಾವ ಹರ್ಮನ್‌ಪ್ರೀತ್ ಕೌರ್ ಬಳಗದವರ ಮುಖದಲ್ಲಿ ಕಾಣುತ್ತಿತ್ತು.

ಕಾಮನ್‌ವೆಲ್ತ್ ಕೂಟದಲ್ಲಿ ಭಾನುವಾರ ತಡರಾತ್ರಿ ಮುಕ್ತಾಯವಾದ ಫೈನಲ್‌ನಲ್ಲಿ ಭಾರತ ತಂಡವು 9 ರನ್‌ಗಳಿಂದ ಆಸ್ಟ್ರೇಲಿಯಾದ ಎದುರು ಸೋತಿತು. ಇದೇ ಮೊದಲ ಬಾರಿ ಕಾಮನ್‌ವೆಲ್ತ್ ಕೂಟದಲ್ಲಿ ಸೇರ್ಪಡೆಯಾಗಿದ್ದ ಟಿ20 ಕ್ರಿಕೆಟ್‌ನಲ್ಲಿ ಬೆಳ್ಳಿ ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 161 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಭಾರತ ತಂಡವು 19.3 ಓವರ್‌ಗಳಲ್ಲಿ 152 ರನ್‌ ಗಳಿಸಿ ಎಲ್ಲ ವಿಕೆಟ್‌ಗಳನ್ಣೂ ಕಳೆದುಕೊಂಡಿತು.

ADVERTISEMENT

ನಾಯಕಿ ಹರ್ಮನ್‌ಪ್ರೀತ್ ಕೌರ್ (65; 43ಎ) ಮತ್ತು ಜೆಮಿಮಾ ರಾಡ್ರಿಗಸ್ (33;33) ಅವರಿಬ್ಬರೂ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 96 ರನ್‌ ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಕೊನೆಯ ಆರು ಓವರ್‌ಗಳಲ್ಲಿ ಗೆಲುವಿಗೆ 50 ರನ್‌ಗಳ ಅಗತ್ಯವಿದ್ದಾಗ ಪಂದ್ಯ ನಾಟಕೀಯ ತಿರುವು ಪಡೆಯಿತು.

ಆಸ್ಟ್ರೇಲಿಯಾ ಬೌಲರ್ ಮೇಗನ್ ಶುಟ್ (27ಕ್ಕೆ2) ಈ ಜೊತೆಯಾಟ ಮುರಿದು ಮಹತ್ವದ ತಿರುವು ನೀಡಿದರು. ಕೌರ್ ಸೇರಿದಂತೆ ಮೂರು ವಿಕೆಟ್‌ಗಳನ್ನು ಆ್ಯಷ್ಲೆ ಗಾರ್ಡನರ್‌ ಗಳಿಸಿದರು. ಅಲ್ಲದೇ ಭಾರತದ ಮೂವರು ಬ್ಯಾಟರ್‌ಗಳು ರನ್‌ಔಟ್ ಆಗಿದ್ದು, ಚಿನ್ನದ ಪದಕ ಕೈತಪ್ಪಲು ಕಾರಣವಾದವು.

‘ಪ್ರತಿ ಸಲ ಫೈನಲ್‌ ಹಣಾಹಣಿಗಳಲ್ಲಿ ನಾವು ಇಂತಹ ಲೋಪಗಳನ್ನು ಮಾಡುತ್ತಿದ್ದೇವೆ. ಅದೂ ಬ್ಯಾಟಿಂಗ್‌ನಲ್ಲಿ. ಈ ದೌರ್ಬಲ್ಯವನ್ನು ತೊಡೆದುಹಾಕಬೇಕಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಿದೆ’ ಎಂದು ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೌರ್ ಹೇಳಿದರು.

‘ಕೊನೆಯ ಹಂತದಲ್ಲಿ ನಾನು ಅಥವಾ ಪೂಜಾ (ವಸ್ತ್ರಕರ್) ಗಟ್ಟಿಯಾಗಿ ನಿಲ್ಲಬೇಕಿತ್ತು. ಇನ್ನಷ್ಟು ಸ್ಕೋರ್ ಗಳಿಸಿದ್ದರೆ ಕೆಳಕ್ರಮಾಂಕದವರಿಗೆ ಸುಲಭವಾಗುತ್ತಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.