ADVERTISEMENT

ಕ್ರಿಕೆಟ್‌ ತೊರೆಯುವಂತೆ ಕೂಗು: ಸಿರಾಜ್‌ಗೆ ಧೋನಿ ನೀಡಿದ ಸಲಹೆ ಏನು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2022, 9:19 IST
Last Updated 8 ಫೆಬ್ರುವರಿ 2022, 9:19 IST
ಮೊಹಮ್ಮದ್ ಸಿರಾಜ್ ಮತ್ತು ಎಂ.ಎಸ್‌.ಧೋನಿ
ಮೊಹಮ್ಮದ್ ಸಿರಾಜ್ ಮತ್ತು ಎಂ.ಎಸ್‌.ಧೋನಿ   

ನವದೆಹಲಿ: ಐಪಿಎಲ್‌ ಪಂದ್ಯವೊಂದರಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಅಭಿಮಾನಿಗಳು ಕ್ರಿಕೆಟ್‌ ತೊರೆಯುವಂತೆ ನನ್ನನ್ನು ಒತ್ತಾಯಿಸಿದ್ದರು. ಆಗ ಸಿಎಸ್‌ಕೆ ತಂಡದ ನಾಯಕ ಎಂ.ಎಸ್‌.ಧೋನಿಯವರು ತಮಗೆ ಆತ್ಮಸ್ಥೈರ್ಯ ತುಂಬಿದ ಘಟನೆಯನ್ನು ಆರ್‌ಸಿಬಿ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮೆಲುಕು ಹಾಕಿದ್ದಾರೆ.

2019ರ ಐಪಿಎಲ್‌ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪರ ಒಂಬತ್ತು ಪಂದ್ಯಗಳನ್ನು ಆಡಿದ್ದ ಸಿರಾಜ್‌, ಕೇವಲ ಏಳು ವಿಕೆಟ್‌ ಮಾತ್ರ ಪಡೆದಿದ್ದರು. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ‌ 2.2 ಓವರ್‌ ಬೌಲಿಂಗ್ ಮಾಡಿದ್ದ ಸಿರಾಜ್‌ 36 ರನ್‌ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಈ ಸಂದರ್ಭದಲ್ಲಿ ಸಿರಾಜ್‌ರನ್ನು ‘ಕ್ರಿಕೆಟ್‌ ತೊರೆದು ಹೋಗಿ ನಿಮ್ಮ ತಂದೆಯವರೊಂದಿಗೆ ಆಟೊ ಓಡಿಸಿ’ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹಿಸಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ ಸಿರಾಜ್, ‘2019ರ ಐಪಿಎಲ್‌ ಆವೃತ್ತಿಯಲ್ಲಿ ನನ್ನ ಪ್ರದರ್ಶನ ಅತ್ಯಂತ ಕೆಟ್ಟದಾಗಿತ್ತು. ಇಲ್ಲಿಗೆ ನನ್ನ ವೃತ್ತಿಜೀವನ ಅಂತ್ಯ ಎಂದು ಭಾವಿಸಿದ್ದೆ. ನನ್ನ ಮೇಲೆ ಭರವಸೆ ಇರಿಸಿದ್ದ ಸಹ ಆಟಗಾರರು ಮತ್ತು ತಂಡದ ಫ್ರಾಂಚೈಸಿ ಬೆಂಬಲಕ್ಕೆ ನಿಂತಿದ್ದರು. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಇಂದು ನೀವು ಚೆನ್ನಾಗಿ ಆಟವಾಡಿದರೆ ಜನರು ನಿಮ್ಮನ್ನು ಹೊಗಳುತ್ತಾರೆ. ನೀವು ಉತ್ತಮವಾಗಿ ಆಡದಿದ್ದರೆ ಅದೇ ಜನರು ನಿಮ್ಮನ್ನು ನಿಂದಿಸುತ್ತಾರೆ. ಆದ್ದರಿಂದ ಜನರು ಮಾತನಾಡಿಕೊಳ್ಳುವುದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಪ್ರದರ್ಶನ ಉತ್ತಮವಾಗಿದ್ದರೆ ನಿಮ್ಮನ್ನು ನಿಂದಿಸಿದವರು ‘ನೀವು ಅತ್ಯುತ್ತಮ ಬೌಲರ್ ಭಾಯ್’ ಎನ್ನುತ್ತಾರೆ ಎಂದು ಧೋನಿ ಅವರು ಸಲಹೆ ನೀಡಿದ್ದಾರೆಂದು ಸಿರಾಜ್‌ ಹೇಳಿಕೊಂಡಿದ್ದಾರೆ.

2021ರ ಐಪಿಎಲ್‌ ಟೂರ್ನಿಯಲ್ಲಿ ಸಿರಾಜ್‌ ಉತ್ತಮ ಪ್ರದರ್ಶನ ತೋರಿದರು. ಪ್ರಸಕ್ತ ಐಪಿಎಲ್‌ ಟೂರ್ನಿಗೆ ಆರ್‌ಸಿಬಿ ಫ್ರಾಂಚೈಸಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್‌ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆ ಫೆ.12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.