ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
(ಪಿಟಿಐ ಚಿತ್ರ)
ಬೆಂಗಳೂರು: ಟೀಮ್ ಇಂಡಿಯಾ ಆಟಗಾರರ ಪ್ರವಾಸದ ವೇಳೆ ಕುಟುಂಬ ಸದಸ್ಯರೂ ಜೊತೆಗಿರುವುದರ ಪರವಾಗಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ್ದಾರೆ. 'ನಾನು ಹೋಟೆಲ್‌ಗೆ ಹಿಂತಿರುಗಿ ಒಬ್ಬಂಟಿಯಾಗಿ ಕುಳಿತು ಬೇಸರಪಟ್ಟುಕೊಳ್ಳಲು ಬಯಸುವುದಿಲ್ಲ' ಎಂದು ಅವರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಎದುರಾದ ಹೀನಾಯ ಸೋಲಿನ ಬಳಿಕ ಭಾರತ ತಂಡದಲ್ಲಿ ಶಿಸ್ತು ಸಂಹಿತೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತಷ್ಟು ಬಿಗಿಗೊಳಿಸಿತ್ತು.
ಪ್ರಮುಖವಾಗಿ ಆಟಗಾರರು ತಮ್ಮ ಪತ್ನಿ, ಕುಟುಂಬದ ಜೊತೆ ಪ್ರಯಾಣಿಸುವ ನಿಯಮದಲ್ಲಿ ಬದಲಾವಣೆ ಮಾಡಿತ್ತು. ಒಂದೊಮ್ಮೆ ಕ್ರಿಕೆಟ್ ಪ್ರವಾಸವು 45 ದಿನ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಕುಟುಂಬ ಸದಸ್ಯರು ಆಟಗಾರರೊಂದಿಗೆ ಗರಿಷ್ಠ ಎರಡು ವಾರ (14 ದಿನ) ಮಾತ್ರ ಇರಬಹುದು ಎಂದು ಸೂಚಿಸಿತ್ತು.
ಒಂದು ವೇಳೆ ಪ್ರವಾಸವು ಕಡಿಮೆ ಅವಧಿಯನ್ನು ಹೊಂದಿದ್ದರೆ ಪತ್ನಿ, ಮಕ್ಕಳು ಅಥವಾ ಗೆಳತಿಯರು ಗರಿಷ್ಠ ಒಂದು ವಾರ ಮಾತ್ರ ಇರಬಹುದು ಎಂದು ಸೂಚಿಸಿತ್ತು.
ಈಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಅವಧಿಯಲ್ಲಿ ಕೊಹ್ಲಿ, ರವೀಂದ್ರ ಜಡೇಜ ಹಾಗೂ ಮೊಹಮ್ಮದ್ ಶಮಿ ಅವರ ಕುಟುಂಬದವರು ದುಬೈನಲ್ಲಿ ಇದ್ದರು. ಆದರೆ ತಂಡದ ಹೋಟೆಲ್‌ನಲ್ಲಿ ತಂಗಲಿಲ್ಲ. ಕುಟುಂಬಗಳ ವಾಸ್ತವ್ಯದ ವೆಚ್ಚವನ್ನು ಆಟಗಾರರೇ ಭರಿಸಿದ್ದರು.
'ಕುಟುಂಬದ ಪಾತ್ರವನ್ನು ಜನರಿಗೆ ವಿವರಿಸುವುದು ತುಂಬಾ ಕಷ್ಟ. ಇದರ ಪ್ರಾಮುಖ್ಯತೆಯನ್ನು ಜನರು ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ' ಎಂದು ವಿರಾಟ್ ತಿಳಿಸಿದ್ದಾರೆ.
'ಕುಟುಂಬದ ಸಾನಿಧ್ಯ ಇರುವುದರಿಂದ ಆಟಗಾರನಿಗೆ ಮೈದಾನದಲ್ಲಿ ಎದುರಾದ ಹಿನ್ನಡೆಯಿಂದ ಬೇಗನೆ ಚೇತರಿಸಿಕೊಳ್ಳಲು ನೆರವಾಗಲಿದೆ' ಎಂದು ಕೊಹ್ಲಿ ಹೇಳಿದ್ದಾರೆ.
'ಕೋಣೆಗೆ ಹಿಂತಿರುಗಿ ಬೇಸರಪಟ್ಟುಕೊಳ್ಳಲು ಬಯಸುವುದಿಲ್ಲ. ಹೋಟೆಲ್‌ಗೆ ಹಿಂತಿರುಗಿದಾಗ ಕುಟುಂಬದವರು ಇರುತ್ತಾರೆ. ಅಲ್ಲಿ ನಿಮ್ಮ ಸಹಜ ಕುಟುಂಬ ಜೀವನ ಮುಂದುವರಿಯುತ್ತದೆ' ಎಂದು ಹೇಳಿದ್ದಾರೆ.
'ಕುಟುಂದವರೊಂದಿಗೆ ಸಮಯ ವ್ಯಯ ಮಾಡಲು ಸಿಗುವ ಅವಕಾಶವನ್ನು ನಾನೆಂದೂ ಮಿಸ್ ಮಾಡುವುದಿಲ್ಲ. ನೀವು ಯಾವ ಆಟಗಾರನಲ್ಲೂ ಈ ಪ್ರಶ್ನೆಯನ್ನು ಕೇಳಬಹುದು' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.