ADVERTISEMENT

Bengaluru Stampede: ಪ್ರತಿಯೊಂದು ಜೀವಕ್ಕೂ ಬೆಲೆ ಇದೆ; ಗೌತಮ್ ಗಂಭೀರ್ ಕಿಡಿನುಡಿ

ಪಿಟಿಐ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
<div class="paragraphs"><p>ಗೌತಮ್ ಗಂಭೀರ್&nbsp;</p></div>

ಗೌತಮ್ ಗಂಭೀರ್ 

   

ಮುಂಬೈ: ಯಾವುದೇ ಕ್ರೀಡೆಯಲ್ಲಿ ಕಪ್ ಗೆದ್ದ ಮೇಲೆ ವಿಜಯೋತ್ಸವಕ್ಕಾಗಿ ರೋಡ್‌ ಶೋ ಮಾಡುವ ಅವಶ್ಯಕತೆ ಇದೆಯೇ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ. 

ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ಪ್ರತಿಕ್ರಿಯಿಸಿರುವ ಗಂಭೀರ್, ‘ಇದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ಈ ರೋಡ್‌ ಶೋಗಳ ಬಗ್ಗೆ ನನಗೆ ಒಲವಿಲ್ಲ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದಾಗಲೂ ನಾನು ಇದೇ ಹೇಳಿಕೆ ನೀಡಿದ್ದೆ’ ಎಂದರು. 

ADVERTISEMENT

ಗುರುವಾರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.  ಗಂಭೀರ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಡಿದ್ದರು. ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಾಗ ನಾಯಕತ್ವ ವಹಿಸಿದ್ದರು. 

2012 ಮತ್ತು 2014ರಲ್ಲಿ ಈಡನ್‌ ಗಾರ್ಡನ್‌ನಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರವು ಏರ್ಪಡಿಸಿದ್ದ ಸನ್ಮಾನ ಸಮಾರಂಭಗಳಲ್ಲಿ ಗೌತಮ್ ಭಾಗವಹಿಸಿದ್ದರು. ಆದರೆ ಆ ಸಂದರ್ಭದಲ್ಲಿ ಯಾವುದೇ ರೋಡ್‌ ಶೋ ಇರಲಿಲ್ಲ. 

‘ಜನರ ಜೀವವು ಎಲ್ಲಕ್ಕಿಂತ ಬಹುಮುಖ್ಯ. ಈ ಮಾತನ್ನು ನಾನು ಸದಾ ಹೇಳುತ್ತಲೇ ಇರುತ್ತೇನೆ. ಭವಿಷ್ಯದಲ್ಲಿ  ಈ ತರಹದ ರೋಡ್‌ ಶೋಗಳನ್ನು ಆಯೋಜಿಸುವ ಮುನ್ನ ಜಾಗರೂಕರಾಗಿರಬೇಕು. ನಿನ್ನೆ ನಡೆದ ದುರ್ಘಟನೆಯು ಬಹಳ ಆಘಾತ ಮೂಡಿಸಿದೆ. ಮೃತರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಈ ಘಟನೆಗೆ ಜವಾಬ್ದಾರಿಯುತ ನಾಗರಿಕರಾಗಿ ನಾವೆಲ್ಲರೂ ಹೊಣೆ’ ಎಂದು ಗಂಭೀರ್ ಹೇಳಿದರು. 

‘ಪ್ರತಿಯೊಂದು ಜೀವಕ್ಕೂ ಬೆಲೆ ಇದೆ. ಫ್ರ್ಯಾಂಚೈಸಿ ಅಥವಾ ಇನ್ನಾವುದೇ ಇರಲಿ ಫ್ಯಾನ್‌ಬೇಸ್ ಬೆಳೆಸುವುದರ ಜೊತೆಗೆ ಜವಾಬ್ದಾರಿಯುತವಾಗಿಯೂ ಇರಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಕಪಿಲ್ ದೇವ್ 

ವಿಜಯೋತ್ಸವಕ್ಕಿಂತ ಪ್ರಾಣ ಮುಖ್ಯ: ಕಪಿಲ್ 

ಚಿನ್ನಸ್ವಾಮಿ ಕ್ರೀಡಾಂಣದ ಬಳಿ ಸಂಭವಿಸಿದ ಕಾಲ್ತುಳಿತದ ದುರ್ಘಟನೆಯ ಕುರಿತು ದಿಗ್ಗಜ ಆಟಗಾರ ಕಪಿಲ್ ದೇವ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 

‘ಈ ದುರ್ಘಟನೆಯ ಬಗ್ಗೆ ಬಹಳ ಬೇಸರವಾಗಿದೆ. ನಾವು ಪ್ರತಿಯೊಂದರ ಬಗ್ಗೆಯೂ ಪಾಠ ಕಲಿಯಬೇಕು. ಮುಂದಿನ ಸಲ ಇಂತಹ ಕಾರ್ಯಕ್ರಮಗಳು (ವಿಕ್ಟರಿ ಪರೇಡ್) ನಡೆಯುವಾಗ ಎಲ್ಲರೂ ಬಹಳಷ್ಟು ಜಾಗರೂಕರಾಗಿಬೇಕು. ದುರ್ಘಟನೆಗಳೂ ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಕಪಿಲ್ ದೇವ್ ಹೇಳಿದರು. 

ಅವರು ಬೆಂಗಳೂರಿನಲ್ಲಿ ಆರ್ಚ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಪಿಟಿಐ ಸುದ್ದಿಸಂಸ್ಥೆಯೊಂದಿಗೆ  ಮಾತನಾಡಿದರು. 

 ಸಯ್ಯದ್‌ ಕಿರ್ಮಾನಿ - 

ಚಾಂಪಿಯನ್ನರಿಗೆ ಡೆಡ್ಲಿ ವೆಲ್‌ಕಮ್: ಕಿರ್ಮಾನಿ ಆಕ್ರೋಶ

‘ಇದು ಚಾಂಪಿಯನ್ನರಿಗೆ ಲಭಿಸಿದ ಡೆಡ್ಲಿ ವೆಲ್‌ಕಮ್‌ (ಮಾರಣಾಂತಿಕ ಸ್ವಾಗತ)  ಆಗಿದೆ’ ಎಂದು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಕಿಡಿ ಕಾರಿದ್ದಾರೆ. ‘ಆರ್‌ಸಿಬಿ ಸಂಭ್ರಮಾಚರಣೆ’ ವೇಳೆ ನಡೆದ ಕಾಲ್ತುಳಿತ ಘಟನೆಯ ಕುರಿತು ‘ಇಂಡಿಯಾ ಟುಡೆ’ ಜಾಲತಾಣಕ್ಕೆ ಪ್ರತಿಕ್ರಿಯಿಸಿರುವ ಅವರು ‘ಆರ್‌ಸಿಬಿಯು ಮೊದಲ ಪ್ರಶಸ್ತಿ ಗೆಲ್ಲಲು 17 ವರ್ಷದಿಂದ ಪ್ರಯತ್ನಿಸಿತ್ತು. ಇಷ್ಟು ವರ್ಷ ಕಾದ ಮೇಲೆ ಇನ್ನು ಕೆಲವು ದಿನಗಳವರೆಗೆ ತಡೆದ ವಿಜಯೋತ್ಸವ ನಡೆಸುವ ಸಂಯಮವನ್ನು ಆಯೋಜಕರು ತೋರಬೇಕಿತ್ತು. ಸಮಯೋಜಿತ ಕಾರ್ಯಕ್ರಮದಲ್ಲಿ ಆರ್‌ಸಿಬಿ ಹೀರೊಗಳನ್ನು ಸನ್ಮಾನಿಸಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು’ಎಂದು ಕಿರ್ಮಾನಿ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಕಾಲದಲ್ಲಿ ಅಭಿಮಾನಿಗಳು ಈಗಿನವರಷ್ಟು ಉತ್ಕಟ ಭಾವನೆಯುಳ್ಳವರಾಗಿರಲಿಲ್ಲ. ಅದರಲ್ಲೂ ಐಪಿಎಲ್ ಅಭಿಮಾನಿಗಳಂತೂ ಲಕ್ಷ. ಲಕ್ಷ ಸಂಖ್ಯೆಯಲ್ಲಿದ್ದಾರೆ. ನಮ್ಮ ಸಂದರ್ಭದಲ್ಲಿ ಮಾಧ್ಯಮಗಳು ಹೆಚ್ಚಿರಲಿಲ್ಲ. ಟಿವಿಗಳ ಅತಿ ಪ್ರಚಾರವೂ ಇರಲಿಲ್ಲ’ ಎಂದೂ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.