ಶುಭಮನ್ ಗಿಲ್
(ಬಿಸಿಸಿಐ ಚಿತ್ರ)
ದುಬೈ: ವೇಗಿ ಮೊಹಮ್ಮದ್ ಶಮಿಯ ಪರಿಣಾಮಕಾರಿ ದಾಳಿ ಮತ್ತು ಶುಭಮನ್ ಗಿಲ್ ಅವರ ಅಜೇಯ ಶತಕದಿಂದ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಗುರುವಾರ ಇಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರು ರೋಹಿತ್ ಶರ್ಮಾ ಬಳಗವು 6 ವಿಕೆಟ್‌ಗಳಿಂದ ಜಯಿಸಿತು. ಬಾಂಗ್ಲಾ ತಂಡದ ಮಟ್ಟಿಗೆ ತೌಹೀದ್ ಹೃದಯ್ (100; 118ಎಸೆತ, 4X6, 6X2) ಅವರ ಶತಕವು ಸ್ಮರಣೀಯವಾಗುಳಿಯಿತು.
ಟಾಸ್ ಗೆದ್ದ ಬಾಂಗ್ಲಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶಮಿ (53ಕ್ಕೆ5) ಮತ್ತು ಹರ್ಷಿತ್ ರಾಣಾ (31ಕ್ಕೆ3) ಅವರ ದಾಳಿಯಿಂದಾಗಿ ಬಾಂಗ್ಲಾ ಆರಂಭದಲ್ಲಿಯೇ ಪೆಟ್ಟು ತಿಂದಿತು. 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತು. ಈ ಹಂತದಲ್ಲಿ ಹೃದಯ್ ಮತ್ತು ಜಾಕೀರ್ ಅಲಿ (68; 114ಎ) ಅವರಿಬ್ಬರು 6ನೇ ವಿಕೆಟ್ ಜೊತೆಯಾಟದಲ್ಲಿ 154 ರನ್ ಸೇರಿಸಿ ತಂಡದ ಚೇತರಿಕೆಗೆ ಕಾರಣರಾದರು. ಅದರಲ್ಲೂ ಹೃದಯ್ ಅವರ ಬ್ಯಾಟಿಂಗ್ ಆಕರ್ಷಕವಾಗಿತ್ತು. 9ನೇ ಓವರ್‌ನಲ್ಲಿ ಅಲಿ ಅವರ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿ ರೋಹಿತ್ ಶರ್ಮಾ ಕೈಚೆಲ್ಲಿದರು. 20ನೇ ಓವರ್‌ನಲ್ಲಿ ಹೃದಯ್ ಕಿಚ್ ಆನ್ನು ಮಿಡ್ ಆಫ್ ಫೀಲ್ಡರ್ ಹಾರ್ದಿಕ್ ಪಾಂಡ್ಯ ನೆಲಕ್ಕೆ ಚೆಲ್ಲಿದರು.
ಇದರಿಂದಾಗಿ ಅವರಿಬ್ಬರೂ ತಮ್ಮ ತಂಡವು 49.4 ಓವರ್‌ಗಳಲ್ಲಿ 228 ರನ್ ಗಳಿಸಲು ಕಾರಣರಾದರು. ಇದಕ್ಕುತ್ತರವಾಗಿ ಭಾರತ ತಂಡವು 46.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 231 ರನ್ ಗಳಿಸಿ ಗೆದ್ದಿತು.
ಶಮಿ ಅವರು ಕೊನೆಯ ಹಂತದ ಓವರ್‌ಗಳಲ್ಲಿ ಕೆಳ ಕ್ರಮಾಂಕದ ಬ್ಯಾಟರ್‌ಗಳು ಅಬ್ಬರಿಸದಂತೆ ನೋಡಿಕೊಂಡರು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಶುಭಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಅಮೋಘ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ರೋಹಿತ್ ಫ್ರಂಟ್‌ಫುಟ್ ಹೊಡೆತಗಳ ಮೂಲಕ ಬೌಲರ್‌ಗಳ ಮೇಲೆ ಒತ್ತಡ ಹಾಕಿದರು. ಗಿಲ್ ಬ್ಯಾಕ್‌ಫುಟ್ ಪಂಚ್ ಮತ್ತು ಫ್ಲಿಕ್‌ಗಳ ಮೂಲಕ ಲೆಗ್‌ಸ್ಟಂಪ್ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಿದರು.
ಚೆಂದದ ಕವರ್‌ಡ್ರೈವ್ ಗಳನ್ನೂ ಪ್ರಯೋಗಿಸಿದ ಗಿಲ್ ಬೌಲರ್‌ಗಳ ಪಾಲಿಗೆ ಕಬ್ಬಿಣದ ಕಡಲೆಯಾದರು.
ಅರ್ಧಶತಕದತ್ತ ಸಾಗಿದ್ದ ರೋಹಿತ್ (41 ರನ್) ಅವರು ತಸ್ಕಿನ್ ಅಹಮದ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ರಿಷಾದ ಹುಸೇನ್‌ಗೆ ಕ್ಯಾಚ್ ಆದರು. ವಿರಾಟ್ ಕೊಹ್ಲಿ ತಾಳ್ಮೆಯ ಆಟದ ಮೂಲಕ ರನ್ ಗಳಿಸಿದರು. 38 ಎಸೆತಗಳಲ್ಲಿ 22 ರನ್ ಗಳಿಸಿದರು. ಒಂದು ಬೌಂಡರಿ ಹೊಡೆದು ಆಟಕ್ಕೆ ಕುದುರಿಕೊಳ್ಳುವ ಹೊತ್ತಿನಲ್ಲಿ ರಿಷಾದ್ ಹುಸೇನ್ ಎಸೆತದಲ್ಲಿ ಸೌಮ್ಯ ಸರ್ಕಾರ್‌ಗೆ ಕ್ಯಾಚ್ ಆದರು.
ಶ್ರೇಯಸ್ ಅಯ್ಯರ್ (17 ಎಸೆತಗಳಲ್ಲಿ 15) ಅವರು ವೇಗವಾಗಿ ರನ್ ಗಳಿಸುವ ಯತ್ನದಲ್ಲಿ ಔಟಾದರು. ಅಕ್ಷರ್ ಪಟೇಲ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ತಾಳ್ಮೆಯ ಮೊರೆ ಹೋದ ಗಿಲ್ ಇನಿಂಗ್ಸ್‌ಗೆ ಬಲ ತುಂಬುವ ಯತ್ನ ಮಾಡಿದರು. ಅವರೊಂದಿಗೆ ಸೇರಿಕೊಂಡ ಕೆ.ಎಲ್. ರಾಹುಲ್ (ಔಟಾಗದೇ 41) ಅವರಿಗೆ ಒಂದು ‘ಜೀವದಾನ’ ಲಭಿಸಿತು.
ಇದರ ಪ್ರಯೋಜನ ಪಡೆದ ಇಬ್ಬರೂ ಮುರಿಯದ ಐದನೇ ವಿಕೆಟ್ ಜೊತೆಯಟದಲ್ಲಿ 87 ರನ್ ಸೇರಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.