ADVERTISEMENT

PAK vs NZ | ಯಂಗ್, ಟಾಮ್ ಆಟ: ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಪಾಕ್‌ಗೆ ಸೋಲು

ಪಿಟಿಐ
Published 19 ಫೆಬ್ರುವರಿ 2025, 17:51 IST
Last Updated 19 ಫೆಬ್ರುವರಿ 2025, 17:51 IST
<div class="paragraphs"><p>ಟಾಮ್ ಲೇಥಮ್</p></div>

ಟಾಮ್ ಲೇಥಮ್

   

ಚಿತ್ರ ಕೃಪೆ:ಐಸಿಸಿ

ಕರಾಚಿ: ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಅವರ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ಬುಧವಾರ ಆರಂಭವಾದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ADVERTISEMENT

ಇಲ್ಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಂಗ್ (107;113ಎ) ಮತ್ತು ಲೇಥಮ್ (ಅಜೇಯ 118; 104ಎ) ಅವರ ಬಿರುಸಿನ ಆಟದ ಬಲದಿಂದ ಕಿವೀಸ್ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 320 ರನ್ ಗಳಿಸಿತು. ಅದಕ್ಕುತ್ತರವಾಗಿ ಆತಿಥೇಯ ಪಾಕ್ ತಂಡವು 47.2 ಓವರ್‌ಗಳಲ್ಲಿ 260 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ವಿಲ್‌ ಒ ರೂರ್ಕಿ (47ಕ್ಕೆ 3) ಮತ್ತು ಮಿಚೆಲ್‌ ಸ್ಯಾಂಟನರ್‌ (66ಕ್ಕೆ 3) ದಾಳಿಯೆದುರು ಪಾಕ್‌ ಬ್ಯಾಟರ್‌ಗಳು ಪರದಾಡಿದರು. ಈ ಮಧ್ಯೆ ಬಾಬರ್ ಆಜಂ (64 ರನ್) ಮತ್ತು ಖುಷ್‌ದಿಲ್ ಶಾ (69 ರನ್) ಅರ್ಧಶತಕ ಗಳಿಸಿ ಕೊಂಚ ಹೋರಾಟ ತೋರಿದರು. ಮ್ಯಾಟ್ ಹೆನ್ರಿ ಎರಡು ವಿಕೆಟ್‌ ಪಡೆದರು.

ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಯಂಗ್ ಮತ್ತು ಡೆವೋನ್ ಕಾನ್ವೆ ಆರಂಭದ ಏಳು ಓವರ್‌ಗಳಲ್ಲಿ ಹೆಚ್ಚು ಅವಸರ ಮಾಡಲಿಲ್ಲ. ನಿಧಾನವಾಗಿ ರನ್‌ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 39 ರನ್‌ ಸೇರಿಸಿದರು. ಪಾಕ್ ತಂಡದ ಲೆಗ್‌ಸ್ಪಿನ್ನರ್ ಅಬ್ರಾರ್ ಅಹಮದ್ ಎಸೆತದಲ್ಲಿ ಡೆವೊನ್ ( 10 ರನ್) ಕ್ಲೀನ್‌ಬೌಲ್ಡ್ ಆದರು. ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ (1 ರನ್), ಡ್ಯಾರಿಲ್ ಮಿಚೆಲ್ (10 ರನ್) ಅವರಿಬ್ಬರೂ ಹೆಚ್ಚು ಹೊತ್ತು

ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಈ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಯಂಗ್ ಜೊತೆಗೂಡಿದ ಅನುಭವಿ ಲೇಥಮ್ ಇನಿಂಗ್ಸ್‌ನ ಚಿತ್ರಣವನ್ನೇ ಬದಲಿಸಿಬಿಟ್ಟರು. ಲೇಥಂ 113.46 ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು. 10 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. 4ನೇ ವಿಕೆಟ್ ಜೊತೆಯಾಟದಲ್ಲಿ ಯಂಗ್ ಮತ್ತು ಟಾಮ್ 118 ರನ್ ಸೇರಿಸಿದರು. ಯಂಗ್ ವಿಕೆಟ್ ಗಳಿಸಿದ ನಸೀಮ್ ಶಾ ಜೊತೆಯಾಟವನ್ನು ಮುರಿದರು.

ಕ್ರೀಸ್‌ಗೆ ಬಂದ ಗ್ಲೆನ್ ಫಿಲಿಪ್ಸ್‌ (61; 39ಎ) ಮಿಂಚಿನ ಬ್ಯಾಟಿಂಗ್ ಮಾಡಿದರು. 3 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ ಅವರು 156.41ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಇವರಿಬ್ಬರೂ 5ನೇ ವಿಕೆಟ್ ಜೊತೆಯಾಟದಲ್ಲಿ 125 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ತ್ರಿಶತಕ ದಾಟಿತು.

ಸಂಕ್ಷಿಪ್ತ ಸ್ಕೋರು:

ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 5ಕ್ಕೆ320 (ವಿಲ್ ಯಂಗ್ 107, ಟಾಮ್ ಲೇಥಮ್ ಔಟಾಗದೇ 118, ಗ್ಲೆನ್ ಫಿಲಿಪ್ಸ್ 61, ನಸೀಂ ಶಾ 63ಕ್ಕೆ2, ಹ್ಯಾರಿಸ್ ರವೂಫ್ 83ಕ್ಕೆ2)

ಪಾಕಿಸ್ತಾನ: 47.2 ಓವರ್‌ಗಳಲ್ಲಿ 260 (ಬಾಬರ್‌ ಆಜಂ 64, ಸಲ್ಮಾನ್‌ ಆಘಾ 42, ಖುಷ್‌ದಿಲ್ ಶಾ 69; ಮ್ಯಾಟ್‌ ಹೆನ್ರಿ 25ಕ್ಕೆ 2, ವಿಲ್‌ ಒ ರೂರ್ಕಿ 47ಕ್ಕೆ 3, ಮಿಚೆಲ್‌ ಸ್ಯಾಂಟನರ್‌ 66ಕ್ಕೆ 3). ಫಲಿತಾಂಶ: ನ್ಯೂಜಿಲೆಂಡ್‌ಗೆ 60 ರನ್‌ ಜಯ. ಪಂದ್ಯದ ಆಟಗಾರ: ಟಾಮ್‌ ಲೇಥಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.