ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ದುಬೈ: ಆಸ್ಟ್ರೇಲಿಯಾದ ಆರಂಭ ಆಟಗಾರ ಟ್ರಾವಿಸ್ ಹೆಡ್ ಅವರು ಭಾರತದ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದೆಹಾಕಿ ಬುಧವಾರ ಪ್ರಕಟವಾದ ಐಸಿಸಿ ಟಿ20 ರ್‍ಯಾಂಕಿಂಗ್ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದರು.
ಕಳೆದ ವರ್ಷದ ಡಿಸೆಂಬರ್‌ನಿಂದ ಸೂರ್ಯಕುಮಾರ್ ಅವರೇ ಈವರೆಗೆ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ತೋರಿದ ಉತ್ತಮ ಸಾಧನೆಯ ಪರಿಣಾಮ ಹೆಡ್ ಅಗ್ರಕ್ರಮಾಂಕಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಅವರು ಸೂರ್ಯ (842 ಪಾಯಿಂಟ್ಸ್) ಅವರಿಗಿಂತ ಎರಡು ಪಾಯಿಂಟ್ ಮುಂದಿದ್ದಾರೆ.
ಹೆಡ್ ಈ ಟೂರ್ನಿಯಲ್ಲಿ ಭಾರತದ ವಿರುದ್ಧ ಸೂಪರ್ ಎಂಟರ ಪಂದ್ಯದಲ್ಲಿ ಗಳಿಸಿದ 76 ರನ್ ಸೇರಿದಂತೆ ಎರಡು ಅರ್ಧಶತಕಗಳೊಂದಿಗೆ 255 ರನ್ ಪೇರಿಸಿದ್ದಾರೆ. ಆದರೆ ಅವರ ತಂಡ ಹೊರಬಿದ್ದಿರುವ ಕಾರಣ, ಸೂರ್ಯ ಅವರು ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.
ಇಂಗ್ಲೆಂಡ್‌ನ ಫಿಲ್ ಸಾಲ್ಟ್ (816), ಪಾಕಿಸ್ತಾನದ ಬಾಬರ್ ಆಜಂ (755) ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (746) ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ನಂತರ ಸ್ಥಾನಗಳಲ್ಲಿದ್ದಾರೆ. ಜಾನ್ಸನ್ (ವೆಸ್ಟ್ ಇಂಡೀಸ್) ಹತ್ತನೇ ಸ್ಥಾನದಲ್ಲಿದ್ದಾರೆ. ಮೊದಲ ಸಲ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರ ಅವರು 44 ಸ್ಥಾನಗಳಷ್ಟು ಜಿಗಿದು, 24ನೇ ಸ್ಥಾನಕ್ಕೇರಿದ್ದಾರೆ. ಕುಲದೀಪ್ ಯಾದವ್‌ಗೆ ಸ್ವಲ್ಪದರಲ್ಲೇ ಟಾಪ್ 10 ಸ್ಥಾನ ಕೈತಪ್ಪಿದೆ. ಅವರು 20 ಸ್ಥಾನ ಜಿಗಿದು 11ನೇ ಸ್ಥಾನಕ್ಕೆ ಬಡ್ತಿಪಡೆದಿದ್ದಾರೆ. ಇಂಗ್ಲೆಂಡ್‌ನ ಅದಿಲ್ ರಶೀದ್ (719 ಪಾಯಿಂಟ್ಸ್) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿರುವ ಅಫ್ಗಾನಿಸ್ತಾನ ತಂಡದ ನಾಯಕ ರಶೀದ್ ಖಾನ್ (681) ಎರಡನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ, ಆಸ್ಟ್ರೇಲಿಯಾದ ಜೋಸ್ ಹ್ಯಾಜಲ್‌ವುಡ್ ಮತ್ತು ವೆಸ್ಟ್ ಇಂಡೀಸ್ ಅಖಿಲ್ ಹುಸೇನ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಅಕ್ಷರ್ ಪಟೇಲ್ ಎಂಟನೇ ಸ್ಥಾನದಲ್ಲಿದ್ದು, ರ‍್ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ಭಾರತದ ಆಟಗಾರ ಎನಿಸಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ ಅವರು ಅಲ್ಪಕಾಲ ಅಗ್ರಸ್ಥಾನದಲ್ಲಿದ್ದ ನಂತರ ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ವನಿಂದು ಹಸರಂಗ ಅಗ್ರಸ್ಥಾನಕ್ಕೇರಿದ್ದಾರೆ. ಅಫ್ಗಾನಿಸ್ತಾನದ ಮೊಹಮ್ಮದ್ ನಬಿ ಎರಡನೇ, ಭಾರತದ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್‌ನ ರೋಸ್ಟನ್ ಚೇಸ್ 17 ರಿಂದ 12ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
ಐಸಿಸಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ರ್‍ಯಾಂಕಿಂಗ್ ಪಟ್ಟಿ:
1. ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ): 844
2. ಸೂರ್ಯಕುಮಾರ್ ಯಾದವ್ (ಭಾರತ): 842
3. ಫಿಲ್ ಸಾಲ್ಟ್ (ಇಂಗ್ಲೆಂಡ್): 816
4. ಬಾಬರ್ ಆಜಂ (ಪಾಕಿಸ್ತಾನ): 755
5. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 746
6. ಜೋಸ್ ಬಟ್ಲರ್ (ಇಂಗ್ಲೆಂಡ್): 716
7. ಯಶಸ್ವಿ ಜೈಸ್ವಾಲ್ (ಭಾರತ): 672
8. ಏಡೆನ್ ಮಾರ್ಕರಮ್ (ದ.ಆಫ್ರಿಕಾ): 659
9. ಬ್ರಂಡನ್ ಕಿಂಗ್ (ವೆಸ್ಟ್ ಇಂಡೀಸ್): 656
10. ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್): 655
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.