ಅಂಪೈರ್ ಬಳಿ ಚೆಂಡಿನ ಆಕಾರದ ಬಗ್ಗೆ ಮಾತನಾಡಿದ್ದ ಪಂತ್
ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದ ವೇಳೆ ಅಂಪೈರ್ ತೀರ್ಮಾನದ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ ವಾಗ್ದಂಡನೆ ವಿಧಿಸಿದೆ ಎಂದು ವರದಿಯಾಗಿದೆ.
27 ವರ್ಷದ ರಿಷಭ್ ಪಂತ್ ಅವರು ಐಸಿಸಿ ನೀತಿ ಸಂಹಿತೆಯ ಹಂತ–1 ಅನ್ನು ಉಲ್ಲಂಘನೆ ಮಾಡಿರುವುದು ಸಾಬೀತಾಗಿದ್ದು, ಅವರ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆ ಮಾಡಲಾಗಿದೆ.
ಹಂತ–1 ಉಲ್ಲಂಘನೆಗಳಿಗೆ ಅಧಿಕೃತ ವಾಗ್ದಂಡನೆಯ ಕನಿಷ್ಠ ದಂಡ, ಆಟಗಾರನ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳು ಸೇರಿವೆ.
ಭಾನುವಾರ ಇಂಗ್ಲೆಂಡ್ ಮೊದಲ ಇನಿಂಗ್ಸ್ ಬ್ಯಾಟಿಂಗ್ ವೇಳೆ ಬೆನ್ ಸ್ಟೋಕ್ಸ್ ಮತ್ತು ಹ್ಯಾರಿ ಬ್ರೂಕ್ ಕ್ರೀಸ್‌ನಲ್ಲಿದ್ದರು. ಭಾರತ ತಂಡದ ಉಪನಾಯಕರಾಗಿರುವ ಪಂತ್ ಆ ವೇಳೆ ಚೆಂಡು ಆಕಾರ ಕಳೆದುಕೊಂಡಿದ್ದು ಬದಲಿಸುವಂತೆ ಅಂಪೈರ್‌ಗಳಿಗೆ ಮನವಿ ಮಾಡಿದ್ದರು.
‘ಚೆಂಡಿನ ಗೇಜ್ ಬಳಸಿ ಪರಿಶೀಲಿಸಿದ ಅಂಪೈರ್‌ಗಳು ಬದಲಾವಣೆಗೆ ನಿರಾಕರಿಸಿದ್ದರು. ಆಗ ಪಂತ್ ಅವರು ಅಂಪೈರ್‌ಗಳ ಎದುರೇ ಚೆಂಡನ್ನು ನೆಲಕ್ಕೆ ಕುಕ್ಕಿ ಅಸಮಾಧಾನ ಹೊರಹಾಕಿದ್ದರು’ ಎಂದು ಐಸಿಸಿ ಹೇಳಿಕೆ ತಿಳಿಸಿದೆ.
‘ಪಂತ್ ತಪ್ಪೊಪ್ಪಿಕೊಂಡಿದ್ದಾರೆ. ಆನ್‌ಫೀಲ್ಡ್ ಅಂಪೈರ್‌ಗಳಾದ ಕ್ರಿಸ್ ಗಫಾನಿ ಮತ್ತು ಪಾಲ್ ರೈಫೆಲ್ ಅವರ ವರದಿಯ ಮೇರೆಗೆ ವಿಚಾರಣೆ ನಡೆದು ರೆಫ್ರಿ ರಿಚಿ ರಿಚರ್ಡ್‌ಸನ್ ಅವರು ಕೈಗೊಂಡ ಕ್ರಮಕ್ಕೆ ಪಂತ್ ಸಮ್ಮತಿಸಿದ್ದಾರೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.