ADVERTISEMENT

ಭಾರತ ವಿರುದ್ಧ ಪಂದ್ಯಕ್ಕೆ ಬಹಿಷ್ಕಾರ: ಪಾಕ್ ಕ್ರಿಕೆಟ್ ಮಂಡಳಿಯ ವಿವರಣೆ ಕೇಳಿದ ICC

ಟಿ20 ವಿಶ್ವಕಪ್

ಪಿಟಿಐ
Published 7 ಫೆಬ್ರುವರಿ 2026, 18:23 IST
Last Updated 7 ಫೆಬ್ರುವರಿ 2026, 18:23 IST
<div class="paragraphs"><p>ಭಾರತ–ಪಾಕಿಸ್ತಾನ</p></div>

ಭಾರತ–ಪಾಕಿಸ್ತಾನ

   

– ಗೆಟ್ಟಿ ಚಿತ್ರ

ನವದೆಹಲಿ: ಶನಿವಾರ ಆರಂಭವಾದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎದುರಿನ ಪಂದ್ಯದಲ್ಲಿ ತಮ್ಮ ತಂಡ ಆಡುವುದಿಲ್ಲ ಎಂದು ಹೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿವರಣೆ ಕೇಳಿದೆ. 

ADVERTISEMENT

‘ಪಿಸಿಬಿಯು ಅನಿವಾರ್ಯ ಕಾರಣಗಳಿಂದಾಗಿ ಒಪ್ಪಂದ ಪಾಲಿಸಲು ಅಸಾಧ್ಯವಾದ ಪರಿಸ್ಥಿತಿ ಎಂದು ವ್ಯಾಖ್ಯಾನಿಸಿ, ತನ್ನ ಸರ್ಕಾರದ ಮೇಲೆ ಹೊಣೆ ಹೊರಿಸಿ ನುಣುಚಿಕೊಳ್ಳುತ್ತಿಲ್ಲ ಎಂಬುದರ ಬಗ್ಗೆ ವಿವರಣೆ ನೀಡಬೇಕು’ ಎಂದು ಐಸಿಸಿ ಹೇಳಿದೆ. 

ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ತಮ್ಮ ದೇಶದ ತಂಡವು ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೆ ಇದೀಗ ಪಿಸಿಬಿಯು ಪಂದ್ಯ ಆಡಲು  ಐಸಿಸಿಗೆ ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಭಾರತ ಮತ್ತು ಪಾಕ್ ಪಂದ್ಯವು ನಡೆಯುವ ಸಣ್ಣ ಭರವಸೆ ಮೂಡಿದಂತಾಗಿದೆ.

‘ಈ ಕುರಿತು ಮಾತುಕತೆಗಳು ಆರಂಭವಾಗಿವೆ’ ಎಂದು ಐಸಿಸಿಯ ನಿರ್ದೇಶಕರೊಬ್ಬರು ತಿಳಿಸಿದ್ದಾರೆ. 

ಟೂರ್ನಿಯಲ್ಲಿ ಉಳಿದೆಲ್ಲ ಪಂದ್ಯಗಳನ್ನು ಆಡಿ, ಭಾರತದ ಎದುರಿನ ಹಣಾಹಣಿಯನ್ನು ಮಾತ್ರ ಬಹಿಷ್ಕರಿಸಿದ್ದರ ಕುರಿತು ಐಸಿಸಿಯು ವಿವರಣೆ ಕೇಳಿದೆ. 

ಐಸಿಸಿಯಿಂದ ಅಧಿಕೃತ ಸೂಚನೆ ಬಂದ ನಂತರ ಪಿಸಿಬಿಯು ಮಾತುಕತೆಗಳನ್ನು ಚುರುಕುಗೊಳಿಸಿದೆ. 

ಐಸಿಸಿ ಕೂಡ ಪಾಕ್ ಮಂಡಳಿಯೊಂದಿಗೆ ರಚನಾತ್ಮಕ ರೀತಿಯಲ್ಲಿ ಸಂಭಾವ್ಯ ನಿರ್ಣಯಗಳನ್ನು ತೆಗೆದುಕೊಳ್ಳುವತ್ತ ಕಾರ್ಯಪ್ರವೃತ್ತವಾಗಿದೆ.  ಕ್ರೀಡೆಯ ಹಿತಾಸಕ್ತಿಗೆ ತಕ್ಕ ಪರಿಹಾರ ತೆಗೆದುಕೊಳ್ಳು ಪ್ರಯತ್ನದಲ್ಲಿದೆ. 

ಐಸಿಸಿಯು ಪಿಸಿಬಿಗೆ ಸರಣಿ ಪ್ರಶ್ನೆಗಳನ್ನು ಕಳುಹಿಸಿದೆ. ಪರ್ಯಾಯಗಳನ್ನು ಅನ್ವೇಷಿಸಲು ಅಥವಾ ಭಾಗವಹಿಸದಿರುವುದನ್ನು ಆಯ್ಕೆ ಮಾಡುವ ಮೊದಲು ವಿನಾಯಿತಿಗಳನ್ನು ಪಡೆಯಲು ಯಾವ ಪ್ರಯತ್ನಗಳನ್ನು ಮಾಡಿದೆ ಎಂಬುದನ್ನು ಪ್ರದರ್ಶಿಸಲು ಪಿಸಿಬಿಯನ್ನು ಕೇಳಿದೆ. ಭಾರತದ ಎದುರಿನ ಪಂದ್ಯದಿಂದ ಹಿಂದೆ ಸರಿಯಲು ಅಗತ್ಯವಾದ  ಪುರಾವೆಗಳನ್ನು ನೀಡಬೇಕು ಎಂದೂ ಐಸಿಸಿ ಕೇಳಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.