
ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು
(ಚಿತ್ರ ಕೃಪೆ: ಐಸಿಸಿ)
ಕರಾಚಿ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಇದೇ ತಿಂಗಳು ನಡೆಯಲಿರುವ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ವಿರುದ್ಧ ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಆದರೆ ಭಾರತದ ವಿರುದ್ಧದ ಹೈ-ಪ್ರೊಫೈಲ್ ಪಂದ್ಯವನ್ನು ಆಡಬಾರದು ಎಂದು ಪಾಕ್ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.
ಭದ್ರತಾ ಕಾರಣಗಳಿಗಾಗಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ನಿರಾಕರಿಸಿತ್ತು. ಇದರಿಂದಾಗಿ ಟೂರ್ನಿಯಿಂದಲೇ ಬಾಂಗ್ಲಾದೇಶ ಹಿಂದಕ್ಕೆ ಸರಿದಿತ್ತು. ಐಸಿಸಿಯ ಈ ತೀರ್ಮಾನಕ್ಕೆ ರಾಜಕೀಯ ಪ್ರತಿಭಟನೆಯಾಗಿ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಐಸಿಸಿ ಸಭೆಯಲ್ಲಿ ಬಾಂಗ್ಲಾ ನಿಲುವನ್ನು ಪಾಕಿಸ್ತಾನ ಬೆಂಬಲಿಸಿತ್ತು.
ಐಸಿಸಿ ಎಚ್ಚರಿಕೆ...
ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿರುವ ಐಸಿಸಿ, ಭಾರತ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ದಂಡನೆ ಸೇರಿದಂತೆ ಅದರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದೆ.
ಈ ನಿರ್ಧಾರದಿಂದ ಜಾಗತಿಕ ಕ್ರಿಕೆಟ್ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತನ್ನ ದೇಶದಲ್ಲಿ ಆಗುವ ದೀರ್ಘಕಾಲೀನ ಕ್ರಿಕೆಟ್ ಮಹತ್ವವನ್ನು ಅದು ಪರಿಗಣಿಸುತ್ತದೆ ಎಂದು ಐಸಿಸಿ ಆಶಿಸುತ್ತದೆ. ಏಕೆಂದರೆ ಪಾಕಿಸ್ತಾನ ಸಹ ಪೂರ್ಣ ಸದಸ್ಯ ರಾಷ್ಟ್ರವಾಗಿದ್ದು, ಅದರ ಫಲಾನುಭವಿಯಾಗಿದೆ ಎಂದು ಹೇಳಿದೆ.
ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸರ್ಕಾರದ ನಿರ್ಧಾರವನ್ನು ಐಸಿಸಿ ಗೌರವಿಸುತ್ತದೆ. ಆದರೆ ಈ ನಿರ್ಧಾರವು ಜಾಗತಿಕ ಕ್ರಿಕೆಟ್ ಹಿತಾಸಕ್ತಿ ಅಥವಾ ಪಾಕಿಸ್ತಾನ ಸೇರಿದಂತೆ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಅಭಿಲಾಷೆಯ ಪರವಾಗಿಲ್ಲ ಎಂದಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಪ್ರಾಯೋಜಕತ್ವ ಮತ್ತು ಪ್ರಸಾರದಿಂದ ಹಣದ ಹೊಳೆಯೇ ಹರಿದುಬರುತ್ತದೆ. ಅಭಿಮಾನಿಗಳಲ್ಲೂ ಹೆಚ್ಚಿನ ರೋಚಕತೆ ಮನೆ ಮಾಡುತ್ತದೆ.
ಈ ಪಂದ್ಯ ನಡೆಯದಿದ್ದರೆ ಆತಿಥೇಯ ಪ್ರಸಾರಕರಿಗೆ 10 ಸೆಕೆಂಡುಗಳ ಕಮರ್ಷಿಯಲ್ ಸ್ಲಾಟ್‌ಗೆ ₹40 ಲಕ್ಷ ನಿಗದಿಯಂತೆ ಅಂದಾಜು ₹200ರಿಂದ ₹250 ಕೋಟಿ ಜಾಹೀರಾತು ಆದಾಯ ನಷ್ಟವಾಗಬಹುದು ಎಂದು ತಿಳಿದು ಬಂದಿದೆ.
ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿದರೆ ಭಾರತ ವಾಕ್ ಓವರ್ ಪಡೆಯಲಿದೆ. ಮತ್ತೊಂದೆಡೆ ಪಾಕಿಸ್ತಾನದ ಮೇಲೆ ಐಸಿಸಿ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.