ಭಾರತ ಮಹಿಳಾ ಕ್ರಿಕೆಟ್ ತಂಡ
(ಚಿತ್ರ ಕೃಪೆ: X/@BCCIWomen)
ಬೆಂಗಳೂರು: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿರುವ ಆತಿಥೇಯ ಭಾರತ ತಂಡದ ಸೆಮಿಫೈನಲ್ ಹಾದಿ ಕಠಿಣವೆನಿಸಿದೆ.
ಅಗ್ರ ಎಂಟು ತಂಡಗಳು ಭಾಗವಹಿಸುವ, ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೊದಲ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಭಾರತ ತಲಾ ಎರಡು ಗೆಲುವು ಹಾಗೂ ಸೋಲಿನೊಂದಿಗೆ ನಾಲ್ಕು ಅಂಕ ಮಾತ್ರ ಕಲೆ ಹಾಕಿದೆ.
+0.682ರ ರನ್‌ರೇಟ್ ಕಾಯ್ದುಕೊಂಡಿರುವ ಹರ್ಮನ್‌ಪ್ರೀತ್ ಕೌರ್ ಬಳಗವು ಸದ್ಯ ನಾಲ್ಕನೇ ಸ್ಥಾನದಲ್ಲಿದೆ.
ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.
ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಭಾರತ, ಬಳಿಕದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಹಿನ್ನಡೆ ಅನುಭವಿಸಿತ್ತು.
ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಮಯದಡಿಯಲ್ಲಿ 59 ರನ್ ಅಂತರದ ಜಯ ದಾಖಲಿಸಿತ್ತು. ಬಳಿಕ ಕೊಲಂಬೊದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 88 ರನ್ ಅಂತರದ ಜಯ ಸಾಧಿಸಿತ್ತು.
ಆದರೆ ವಿಶಾಖಪಟ್ಟಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ವಿಕೆಟ್ ಅಂತರದಿಂದ ಪರಾಭವ ಕಂಡಿತ್ತು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಹೈಸ್ಕೋರಿಂಗ್ ಪಂದ್ಯದಲ್ಲೂ ಮೂರು ವಿಕೆಟ್ ಅಂತರದಿಂದ ಶರಣಾಗಿತ್ತು.
ಟೂರ್ನಿಯ ಲೀಗ್ ಹಂತದಲ್ಲೀಗ ಭಾರತಕ್ಕೀಗ ಮೂರು ಪಂದ್ಯಗಳಷ್ಟೇ ಉಳಿದಿದೆ. ಅಕ್ಟೋಬರ್ 19ರಂದು ಇಂದೋರ್‌ನಲ್ಲಿ ಇಂಗ್ಲೆಂಡ್, 23ರಂದು ನವಿ ಮುಂಬೈಯಲ್ಲಿ ನ್ಯೂಜಿಲೆಂಡ್ ಮತ್ತು 26ರಂದು ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿದೆ. ಈ ಪೈಕಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ.
ಒಂದು ವೇಳೆ ತನ್ನೆಲ್ಲ ಮೂರು ಪಂದ್ಯಗಳನ್ನು ಗೆದ್ದರೆ ಒಟ್ಟು 10 ಅಂಕಗಳೊಂದಿಗೆ ಸೆಮಿಫೈನಲ್ ಜಾಗವನ್ನು ಖಚಿತಪಡಿಸಿಕೊಳ್ಳಲಿದೆ.
ಹಾಗೊಂದು ವೇಳೆ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಮಾತ್ರ ಗೆದ್ದರೆ ಎಂಟು ಅಂಕಗಳನ್ನು ಪಡೆಯಲಿದೆ. ಈ ಸಂದರ್ಭದಲ್ಲಿ ಇತರೆ ಪಂದ್ಯಗಳ ಫಲಿತಾಂಶ ಹಾಗೂ ನೆಟ್ ರನ್‌ರೇಟ್ ಅನ್ನು ಅವಲಂಬಿಸಲಿದೆ.
ಇನ್ನೊಂದು ವೇಳೆ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದರೆ ಟ್ರೋಫಿ ಗೆಲ್ಲುವ ಕನಸು ಅಸ್ತಮಿಸಲಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025: ಅಂಕಪಟ್ಟಿ ಇಂತಿದೆ (15ನೇ ಪಂದ್ಯದ ಅಂತ್ಯಕ್ಕೆ)
ಚಿತ್ರ ಕೃಪೆ: ಐಸಿಸಿ
ಆಸ್ಟ್ರೇಲಿಯಾ ಅಜೇಯ ಓಟ ಮುಂದುವರಿಸಿದ್ದು ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಏಳು ಅಂಕ ದಾಖಲಿಸಿದ್ದು, ಅಗ್ರಸ್ಥಾನದಲ್ಲಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಇಂಗ್ಲೆಂಡ್ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಆರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಆರು ಅಂಕ ಗಳಿಸಿದ್ದು, ಮೂರನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.