ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು
–ಪಿಟಿಐ ಚಿತ್ರ
ಇಂದೋರ್: ಸತತವಾಗಿ ಎರಡು ಸೋಲುಗಳಿಂದ ಕಂಗಾಲಾಗಿರುವ ಭಾರತ ತಂಡ ಈಗ ತನ್ನ ಅಭಿಯಾನವನ್ನು ಸರಿದಾರಿಗೆ ತರುವ ಒತ್ತಡದಲ್ಲಿದೆ. ಭಾನುವಾರ ಇಂಗ್ಲೆಂಡ್ ವಿರುದ್ಧ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ನ ಪಂದ್ಯ ಹರ್ಮನ್‌ಪ್ರೀತ್ ಕೌರ್ ಪಡೆಗೆ ನಿರ್ಣಾಯಕವಾಗಿದೆ.
ವಿಶಾಖಪಟ್ಟಣದಲ್ಲಿ ಆತಿಥೇಯ ತಂಡವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕೈಲಿ ಮೂರು ವಿಕೆಟ್‌ಗಳ ಸೋಲನುಭವಿಸಿತ್ತು. ಈ ಹಿನ್ನಡೆ ತಂಡದ ತಂತ್ರಗಾರಿಕೆಯ ಮೇಲೆ ಪ್ರಶ್ನೆಗಳನ್ನು ಮೂಡಿಸಿದೆ. ಹಾಲಿ ವಿಶ್ವಕಪ್‌ನ ಈವರೆಗಿನ ಪಂದ್ಯಗಳಲ್ಲಿ ಐವರು ಬ್ಯಾಟರ್‌ಗಳು, ಐವರು ಬೌಲರ್, ಒಬ್ಬರು ಕೀಪರ್ ಸಂಯೋಜನೆ ರೂಪಿಸಿ ಆಡುತ್ತಿರುವುದು ತಂಡದ ‘ಟೆಂಪ್ಲೆಟ್’ ಆಗಿದೆ. ಬೌಲರ್‌ಗಳಲ್ಲಿ ಮೂವರು ಆಲ್‌ರೌಂಡರ್ ಪಾತ್ರ ವಹಿಸುತ್ತಿದ್ದಾರೆ.
ಆದರೆ ಇದು ತಂಡದ ಇತಿಮಿತಿಗಳನ್ನು ಬಯಲುಗೊಳಿಸಿದೆ. ಸೆಮಿಫೈನಲ್ ರೇಸ್‌ನಲ್ಲಿರಬೇಕಾದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಎರಡನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಪರಿಣತ ಬೌಲರ್ ಇಲ್ಲದಿರುವುದು ತಂಡಕ್ಕೆ ದುಬಾರಿಯಾಗಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು, 251 ಮತ್ತು 330 ರನ್‌ಗಳನ್ನು ಚೇಸ್ ಮಾಡಿರುವುದು ಆತಿಥೇಯರು ಬೌಲಿಂಗ್ ಸೀಮಿತ ಬೌಲಿಂಗ್ ಶಕ್ತಿಗೆ ಕನ್ನಡಿಯಾಗಿದೆ.
ಆಲ್‌ರೌಂಡರ್‌ಗಳ ಮೂಲಕ ಬ್ಯಾಟಿಂಗ್ ಆಳಕ್ಕೆ ಒತ್ತು ನೀಡಿರುವ ಕಾರಣ ಅಮನ್ಜೋತ್ ಅವರಿಗೆ ಮಣೆಹಾಕಿಕಿದ್ದು, ರೇಣುಕಾ ಸಿಂಗ್ ಬೆಂಚ್ ಕಾಯಬೇಕಿದೆ. ವೇಗದ ವಿಭಾಗದಲ್ಲಿ ಕ್ರಾಂತಿ ಗೌಡ್ ಮಾತ್ರ ಪರಿಣಾಮಕಾರಿ ಎನಿಸಿದ್ದಾರೆ.
ತಂಡಕ್ಕೆ ಇನ್ನೊಂದು ಚಿಂತೆ ಎಂದರೆ ಅಗ್ರ ಸರದಿಯ ಬ್ಯಾಟರ್‌ಗಳು ಲಯದಲ್ಲಿಲ್ಲದಿರುವುದು. ಸ್ಮೃತಿ ಮಂದಾನ, ಪ್ರತಿಕಾ ರಾವಲ್ ಸರಾಗವಾಗಿ ಆಡಿಲ್ಲ. ಆಸ್ಟ್ರೇಲಿಯಾ ವಿರುದ್ಧ ಮಾತ್ರ ಇಬ್ಬರೂ ಅರ್ಧಶತಕಗಳನ್ನು ಗಳಿಸಿದ್ದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ಅವರಿಂದ ಗಮನಾರ್ಹ ಕೊಡುಗೆ ಬಂದಿಲ್ಲ.
ಹೋಳ್ಕರ್ ಕ್ರೀಡಾಂಗಣ ಸಾಂಪ್ರದಾಯಿಕವಾಗಿ ಬ್ಯಾಟರ್ ಸ್ನೇಹಿ ಎನಿಸಿದೆ. ಇಲ್ಲಿನ ಪಂದ್ಯಗಳು ದೊಡ್ಡ ಮೊತ್ತಗಳನ್ನು ಕಂಡಿವೆ.
ಭಾರತದ ಕಥೆ ಈ ರೀತಿಯಾದರೆ, ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ಬಿಟ್ಟರೆ, ಅಜೇಯವಾಗಿ ಉಳಿದ ಇನ್ನೊಂದು ತಂಡ ಇಂಗ್ಲೆಂಡ್. ವೈಯಕ್ತಿಕ ಆಟಗಳಿಂದ ಪಂದ್ಯ ಗೆಲ್ಲಿಸಬಲ್ಲ ಸಮರ್ಥ ಆಟಗಾರ್ತಿಯರು ತಂಡದಲ್ಲಿದ್ದಾರೆ. ತಂಡದ ಬ್ಯಾಟರ್‌ಗಳು ಪಾಕಿಸ್ತಾನ ಎದುರು ಇಕ್ಕಟ್ಟಿಗೆ ಸಿಲುಕಿದ್ದರೂ ಮಳೆ ರಕ್ಷಿಸಿತ್ತು. ಬಾಂಗ್ಲಾದೇಶ ವಿರುದ್ಧವೂ ತಂಡದ ಬ್ಯಾಟಿಂಗ್ ಕೈಕೊಟ್ಟಿತ್ತು. ಆದರೆ ಬೌಲಿಂಗ್ ವಿಭಾಗ ಪ್ರಬಲವಾಗಿದೆ. ಇನ್ನೊಂದು ಪಂದ್ಯ ಗೆದ್ದರೆ, ನಾಟ್ ಶಿವರ್ ಬ್ರಂಟ್ ತಂಡದ ಸೆಮಿಫೈನಲ್ ಹಾದಿ ಸುಗಮ.
ಪಂದ್ಯ ಆರಂಭ: ಮಧ್ಯಾಹ್ನ 3.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.