ADVERTISEMENT

ICC Women's WC: ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ ಕೌರ್‌: ವ್ಯಾಪಕ ಮೆಚ್ಚುಗೆ

ಏಜೆನ್ಸೀಸ್
Published 3 ನವೆಂಬರ್ 2025, 6:37 IST
Last Updated 3 ನವೆಂಬರ್ 2025, 6:37 IST
<div class="paragraphs"><p>ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ&nbsp;ಕೌರ್‌</p></div>

ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ ಕೌರ್‌

   

ಚಿತ್ರ ಕೃಪೆ: ಎಕ್ಸ್‌

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ ಮಹಿಳೆಯರ ತಂಡ ಮೊದಲ ಬಾರಿಗೆ ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. 

ADVERTISEMENT

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದಲ್ಲಿ ಭಾರತ ನಾರಿಯರು ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಇದೇ ವೇಳೆ ತಂಡಕ್ಕೆ ಅಚ್ಚುಕಟ್ಟಾಗಿ ತರಬೇತಿ ನೀಡಿ ಗೆಲುವಿಗೆ ಕಾರಣವಾದ ಕೋಚ್‌ ಅಮೋಲ್ ಮುಜುಂದಾರ್ ಕಾಲಿಗೆ ಕೌರ್‌ ನಮಸ್ಕರಿಸಿದ್ದಾರೆ.

ಕೌರ್‌ ಮೈದಾನದಲ್ಲೇ ಮುಜುಂದಾರ್ ಅವರ ಕಾಲಿಗೆ ಎರಗುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೌರ್ ಅವರ ಅಭಿನಂದನೀಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೌರ್‌ ಕಾಲಿಗೆ ಬೀಳುತ್ತಿದ್ದಂತೆ ಮೇಲೆತ್ತಿ, ಆಲಂಗಿಸಿದ ಮುಜುಂದಾರ್ ಕಣ್ಣಲ್ಲಿ ಹೆಮ್ಮೆಯ ಕಣ್ಣೀರು ಜಿನುಗಿತು.

ಇದಕ್ಕೂ ಮುನ್ನ ಕೌರ್‌, ಬಿಸಿಸಿಐ ಅಧ್ಯಕ್ಷ ಜಯ್‌ ಶಾ ಅವರ ಕಾಲಿಗೂ ನಮಸ್ಕರಿಸಿ ಟ್ರೋಫಿ ಪಡೆದುಕೊಂಡಿದರು. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಹಿಳಾ ತಂಡಕ್ಕೆ ಅಮೋಲ್ ತರಬೇತಿ

2023ರ ಅಕ್ಟೋಬರ್‌ನಲ್ಲಿ ಮಹಿಳಾ ಕ್ರಿಕೆಟ್‌ ತಂಡಕ್ಕೆ ಕೋಚ್‌ ಆಗಿ ಅಮೋಲ್‌ ಬಂದಿದ್ದರು. ಆ ವೇಳೆ ತಂಡದಲ್ಲಿ ಹಲವು ಭಿನ್ನಾಭಿಪ್ರಾಯಗಳಿದ್ದವು. ಮಿಥಾಲಿ ರಾಜ್ ಅವರು ನಿವೃತ್ತಿ ಘೋಷಿಸಿ ಕೆಲವು ತಿಂಗಳುಗಳಷ್ಟೇ ಕಳೆದಿದ್ದವು. ಹರ್ಮನ್‌ಪ್ರೀತ್ ಕೌರ್ ಅವರು ನಾಯಕತ್ವ ವಹಿಸಿಕೊಂಡು ಸ್ವಲ್ಪ ಸಮಯವಾಗಿತ್ತು. ಆಟಗಾರ್ತಿಯರಲ್ಲಿ ಸಮನ್ವಯತೆ ಸಾಧಿಸುವುದು ಸವಾಲಾಗಿತ್ತು. 

ಅಮೋಲ್‌ಗಿಂತ ಮೊದಲಿದ್ದ ಕೋಚ್ ರಮೇಶ್ ಪೊವಾರ್ ಮತ್ತು ನಾಯಕಿಯ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದವು. ಆಗ ಕೋಚ್‌ ಆಗಿ ಸೇರಿದ ಅಮೋಲ್ ತಮ್ಮ ಸಭ್ಯ ನಡವಳಿಕೆ ಮತ್ತು ಚಾಣಾಕ್ಷತೆಯಿಂದ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಿದ್ದರು. ಪ್ರತಿಯೊಬ್ಬ ಆಟಗಾರ್ತಿಯ ಸಾಮರ್ಥ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ಹೊಣೆಗಳನ್ನು ನೀಡಿದ್ದರು. ಹರ್ಮನ್, ಸ್ಮೃತಿ ಮಂದಾನ, ಜೆಮಿಮಾ, ರೇಣುಕಾ ಸಿಂಗ್, ಶಫಾಲಿ ವರ್ಮಾ ಅವರಂತಹ ಅನುಭವವುಳ್ಳ ಆಟಗಾರ್ತಿಯರ ವಿಶ್ವಾಸ ಗಳಿಸಿದರು. ಕ್ರಾಂತಿ ಗೌಡ್, ಅರುಂಧತಿ, ಪ್ರತಿಕಾ ರಾವಲ್, ರಿಚಾ ಘೋಷ್ ಮತ್ತು ಅನ್ಮೋಲ್ ಜೋತ್ ಕೌರ್ ಅವರಂತಹ  ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಟ್ಟಿದ್ದರು. ಈಗ ಅಮೋಲ್‌ ಅವರ ತರಬೇತಿಯಲ್ಲಿ ಭಾರತದ ವನಿತೆಯರು ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.