ADVERTISEMENT

ಇಂಗ್ಲೆಂಡ್:‌ 3 ದಿನ ಕಠಿಣ ಕ್ವಾರಂಟೈನ್; ಭಾರತ ಆಟಗಾರರು ಪರಸ್ಪರ ಭೇಟಿಯಾಗುವಂತಿಲ್ಲ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯ

ಪಿಟಿಐ
Published 4 ಜೂನ್ 2021, 14:00 IST
Last Updated 4 ಜೂನ್ 2021, 14:00 IST
ಅಕ್ಷರ್ ಪಟೇಲ್‌– ಪಿಟಿಐ ಚಿತ್ರ
ಅಕ್ಷರ್ ಪಟೇಲ್‌– ಪಿಟಿಐ ಚಿತ್ರ   

ಸೌತಾಂಪ‍್ಟನ್‌: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯಕ್ಕಾಗಿ ತಾಲೀಮು ನಡೆಸುವುದಕ್ಕೂ ಮೊದಲು ಭಾರತ ಕ್ರಿಕೆಟ್ ತಂಡದ ಆಟಗಾರರು ಮೂರು ದಿನಗಳ ಕಠಿಣ ಕ್ವಾರಂಟೈನ್ ಪೂರ್ಣಗೊಳಿಸಲಿದ್ದಾರೆ. ತಂಡದ ಸ್ಪಿನ್ನರ್ ಅಕ್ಷರ್ ಪಟೇಲ್ ಈ ವಿಷಯ ಬಹಿರಂಗಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಇದೇ 18ರಿಂದ 22ರವರೆಗೆ ನಡೆಯಲಿದೆ. ಬುಧವಾರ ಇಲ್ಲಿಗೆ ಆಗಮಿಸಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡದ ಅಭ್ಯಾಸಕ್ಕೆ ಹೆಚ್ಚಿನ ಸಮಯವಿಲ್ಲ.

ಆದರೆ, ನ್ಯೂಜಿಲೆಂಡ್‌ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಈಗಾಗಲೇ ಕಣಕ್ಕಿಳಿದಿದೆ.

ADVERTISEMENT

ಭಾರತ ತಂಡವು ಮುಂಬೈನಲ್ಲಿ ಈಗಾಗಲೇ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದೆ.

‘ನಾನು ಕಣ್ತುಂಬ ನಿದ್ರಿಸಿದೆ. ಮುಂದಿನ ಯೋಜನೆ ಕ್ವಾರಂಟೈನ್‌. ಮೂರು ದಿನಗಳ ಕಾಲ ಪರಸ್ಪರ ಭೇಟಿಯಾಗಕೂಡದೆಂದು ನಮಗೆ ಸೂಚಿಸಲಾಗಿದೆ. ಹೀಗಾಗಿ ಅಷ್ಟು ದಿನಗಳಿಗೆ ನಮ್ಮ ಕ್ವಾರಂಟೈನ್ ಇರಲಿದೆ‘ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಂಚಿಕೊಂಡಿರುವ ವಿಡಿಯೊದಲ್ಲಿ ಅಕ್ಷರ್‌ ಪಟೇಲ್‌ ಹೇಳಿದ್ದಾರೆ.

ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಒಂದೇ ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದವು.

ಲಂಡನ್‌ಗೆ ತಲುಪಿದ ಬಳಿಕ ಎರಡು ತಾಸುಗಳ ಬಸ್‌ ಪ್ರಯಾಣದ ಮೂಲಕ ಸೌತಾಂಪ್ಟನ್‌ಗೆ ಬಂದಿಳಿದಿವೆ.

ಡಬ್ಲ್ಯುಟಿಸಿ ಫೈನಲ್ ಬಳಿಕ ಕೊಹ್ಲಿ ಪಡೆಯು ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಭಾರತ ಮಹಿಳಾ ತಂಡವು ಆತಿಥೇಯ ಮಹಿಳಾ ತಂಡದ ಎದುರು ಒಂದು ಟೆಸ್ಟ್, ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಮಹಿಳೆಯರ ಟೆಸ್ಟ್ ಪಂದ್ಯವು ಜೂನ್ 16ರಂದು ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.