ADVERTISEMENT

ಸೋತಿದ್ದೀರಿ ಎಂದು ಹೇಳುತ್ತಿಲ್ಲ, ಶೈನಿಗೆ ಅರ್ಹತೆ ಇದೆ ಅವಕಾಶ ನೀಡಿ: ಕಪಿಲ್ ದೇವ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 13:58 IST
Last Updated 7 ಫೆಬ್ರುವರಿ 2020, 13:58 IST
   

ನವದೆಹಲಿ:ಭಾರತಕ್ಕೆ ಮೊದಲ ಸಲ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌, ನ್ಯೂಜಿಲೆಂಡ್‌ ವಿರುದ್ಧದಎರಡನೇ ಏಕದಿನ ಪಂದ್ಯದಲ್ಲಿ ವೇಗಿ ನವದೀಪ್‌ ಶೈನಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಕಿವೀಸ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ ತಂಡ ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಆಘಾತ ಅನುಭವಿಸಿದೆ. 347 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ ಹೊರತಾಗಿಯೂ ಬೌಲರ್‌ಗಳು ಬಿಗುವಿನ ದಾಳಿ ನಡೆಸಲು ವಿಫಲವಾದುದ್ದರಿಂದ ಸೋಲೊಪ್ಪಿಕೊಳ್ಳಬೇಕಾಗಿತ್ತು.

ಮಧ್ಯಮ ವೇಗಿ ಶಾರ್ದೂಲ್‌ ಠಾಕೂರ್‌ ಕೇವಲ 9 ಓವರ್‌ಗಳಲ್ಲಿ 80 ರನ್ ಬಿಟ್ಟುಕೊಟ್ಟಿದ್ದರು. 8.89ರ ಸರಾಸರಿಯಲ್ಲಿ ರನ್‌ ನೀಡಿ ಅತ್ಯಂತ ದುಬಾರಿ ಎನಿಸಿದ್ದರು. ಭಾರತದ ಬೌಲರ್‌ವೊಬ್ಬರು ನ್ಯೂಜಿಲೆಂಡ್‌ ವಿರುದ್ಧ 10ಕ್ಕಿಂತ ಕಡಿಮೆ ಓವರ್‌ ಬೌಲ್‌ ಮಾಡಿ 80 ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟದ್ದು ಇದೇ ಮೊದಲು.

ADVERTISEMENT

ಇದುವರೆಗೆ 9 ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಠಾಕೂರ್‌ 6ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಕೊಟ್ಟು 9 ವಿಕೆಟ್‌ ಪಡೆದಿದ್ದಾರೆ. ಹೀಗಾಗಿ, ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ ಮಾಡುವಂತೆನಾಯಕ ವಿರಾಟ್‌ ಕೊಹ್ಲಿಗೆಕಪಿಲ್‌ ಸಲಹೆ ನೀಡಿದ್ದಾರೆ.

‘ನಿಮಗೆ ವಿಕೆಟ್‌ ಪಡೆಯುವ ಬೌಲರ್‌ನ ಅವಶ್ಯಕತೆ ಇದೆ. ಹಾಗಾಗಿ ನವದೀಪ್‌ ಶೈನಿಯನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಬಹುಮುಖ್ಯ. ನೀವು ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದೀರಿ ಎಂಬುದಕ್ಕಾಗಿ ಹೇಳುತ್ತಿಲ್ಲ. ಆತ ಸ್ಥಾನ ಪಡೆಯಲು ಅರ್ಹನಾಗಿದ್ದಾನೆ. ಶೈನಿಗೆ ವಿಕೆಟ್‌ ಪಡೆಯುವ ಸಾಮರ್ಥ್ಯವಿದೆ. ಬೂಮ್ರಾ ಕಡೆಗೆ ನೋಡಿ, ಆತ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡುವಂತೆ ಬೌಲ್‌ ಮಾಡುತ್ತಾನೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ಇತರೆ ಬೌಲರ್‌ಗಳನ್ನು ಗುರಿಯಾಗಿಸಿ ಆಕ್ರಮಣ ಮಾಡುತ್ತಾರೆ. ಈ ವೇಳೆ ವಿಕೆಟ್ ಪಡೆಯಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.

‘ತಂಡದ ಆಯ್ಕೆಯು ಹಿತಾಸಕ್ತಿಗಳನ್ನು ಆಧರಿಸಿ ಇರಬಾರದು. ತಂಡಕ್ಕೇನು ಅಗತ್ಯ ಹಾಗೂ ಗೆಲುವಿಗೆ ಯಾವುದು ಅವಶ್ಯ ಎಂಬುದರ ಆಧಾರದಲ್ಲಿ ಇರಬೇಕು’ ಎಂದೂ ಕುಟುಕಿದ್ದಾರೆ.

ಮೊದಲ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಹೊರತುಪಡಿಸಿ ಉಳಿದೆಲ್ಲರೂ ದುಬಾರಿಯಾಗಿದ್ದರು. ಬೂಮ್ರಾ 10 ಓವರ್‌ಗಳಲ್ಲಿ 53 ರನ್‌ ನೀಡಿದ್ದರು. ಉಳಿದಂತೆ ಕುಲದೀಪ್‌ ಯಾದವ್‌ 10 ಓವರ್‌ಗಳಲ್ಲಿ ಎರಡು ವಿಕೆಟ್‌ ಪಡೆದು 84 ರನ್, ಮೊಹಮದ್‌ ಶಮಿ 9.1 ಓವರ್‌ಗಳಲ್ಲಿ 1 ವಿಕೆಟ್‌ ಪಡೆದು 63 ರನ್‌ ಮತ್ತುರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 64 ರನ್‌ ಬಿಟ್ಟುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.