ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಮೆಲ್ಬರ್ನ್: ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಲಯದಿಂದ ಬಳಲುತ್ತಿದ್ದಾರೆ.
ಆಫ್-ಸೈಡ್ ಆಚೆಗಿನ ಎಸೆತಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಕೊಹ್ಲಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಆದರೂ ಕೊಹ್ಲಿ ಬೆನ್ನಿಗೆ ನಿಂತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದು ನೀವೇ ಹೇಳಿದ್ದೀರಿ. ಆಧುನಿಕ ಶ್ರೇಷ್ಠರು ತಮ್ಮದೇ ಆದ ಮಾರ್ಗವನ್ನು ಕಂಡುಕೊಳುತ್ತಾರೆ' ಎಂದು ನಗುಮುಖದಿಂದಲೇ ರೋಹಿತ್ ಉತ್ತರಿಸಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿರುವುದನ್ನು ಹೊರತುಪಡಿಸಿದರೆ ಕೊಹ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. 31.50ರ ಸರಾಸರಿಯಲ್ಲಿ 126 ರನ್ ಮಾತ್ರ ಗಳಿಸಿದ್ದಾರೆ.
ಸ್ವತಃ ರೋಹಿತ್ ಶರ್ಮಾ ಕೂಡಾ ಕಳಪೆ ಬ್ಯಾಟಿಂಗ್ ಲಯದಿಂದ ಬಳಲುತ್ತಿದ್ದಾರೆ. ಆದರೆ ಮಗದೊಮ್ಮೆ ಆರಂಭಿಕನಾಗಿ ಇನಿಂಗ್ಸ್ ಆರಂಭಿಸುವರೇ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ.
'ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚಿಂತೆಯಿಲ್ಲ. ಯಾರು ಎಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದರ ಕುರಿತು ನಾವು ಪರಸ್ಪರ ಚರ್ಚಿಸುತ್ತೇವೆ. ಪ್ರತಿ ಸುದ್ದಿಗೋಷ್ಠಿಯಲ್ಲೂ ಈ ಕುರಿತು ಮಾತನಾಡುವುದಿಲ್ಲ' ಎಂದಷ್ಟೇ ಹೇಳಿದ್ದಾರೆ.
ತನುಷ್ ಕೋಟ್ಯಾನ್ ಆಯ್ಕೆಯನ್ನು ನಾಯಕ ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ನಾಳೆಯಿಂದ (ಡಿ.26) ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.