ಜಸ್‌ಪ್ರೀತ್ ಬೂಮ್ರಾ, ಗೌತಮ್ ಗಂಭೀರ್, ರೋಹಿತ್ ಶರ್ಮಾ
(ಚಿತ್ರ ಕೃಪೆ: X/@cricketcomau)
ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ.
ಈ ಕುರಿತು ಟಾಸ್ ವೇಳೆಯಲ್ಲಿ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ಮಾಹಿತಿ ನೀಡಿದ್ದಾರೆ.
'ನಮ್ಮ ಕಪ್ತಾನ ನಾಯಕತ್ವದ ಗುಣಗಳನ್ನು ತೋರಿಸಿದ್ದು, ಸ್ವತಃ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ತಂಡದಲ್ಲಿ ಏಕತೆ ಇದೆ. ಸ್ವಾರ್ಥತೆ ಇಲ್ಲ' ಎಂದು ಬೂಮ್ರಾ ತಿಳಿಸಿದ್ದಾರೆ.
ಸಿಡ್ನಿ ಪಂದ್ಯದಿಂದ ನಾಯಕ ರೋಹಿತ್ ಹೊರಗುಳಿಯಲು ನಿರ್ಧರಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಳಪೆ ಬ್ಯಾಟಿಂಗ್ ಲಯದ ಹಿನ್ನೆಲೆಯಲ್ಲಿ ರೋಹಿತ್ ಅವರನ್ನು ಕೈಬಿಡಲಾಗಿದೆಯೇ? ಸ್ವತಃ ರೋಹಿತ್ ಅವರೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಯೇ ಅಥವಾ ತಂಡದಲ್ಲಿ ಎಲ್ಲವೂ ಸರಿ ಇಲ್ಲವೇ ಎಂಬ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಡಿರುವ 37 ವರ್ಷದ ರೋಹಿತ್ ಕೇವಲ 31 ರನ್‌ಗಳಷ್ಟೇ ಗಳಿಸಿದ್ದರು.
ಪಿತೃತ್ವದ ರಜೆ ಹಿನ್ನೆಲೆಯಲ್ಲಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಜಸ್‌ಪ್ರೀತ್ ಬೂಮ್ರಾ ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು.
ಬಳಿಕ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ರೋಹಿತ್ ಕಪ್ತಾನಗಿರಿ ವಹಿಸಿದ್ದರು. ಆ ವೇಳೆಗೆ ಆರಂಭಿಕನಾಗಿ ಛಾಪು ಮೂಡಿಸಿದ್ದ ಕೆ.ಎಲ್. ರಾಹುಲ್ ಅವರಿಗೆ ಓಪನರ್ ಸ್ಥಾನ ಬಿಟ್ಟುಕೊಟ್ಟು ಸ್ವತಃ ತಾವು ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದರು.
ಆದರೆ ಆಸ್ಟ್ರೇಲಿಯಾ 10 ವಿಕೆಟ್ ಅಂತರದಿಂದ ಜಯ ಗಳಿಸಿದ ಈ ಪಂದ್ಯದಲ್ಲಿ ರೋಹಿತ್ ವೈಫಲ್ಯ ಅನುಭವಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 3 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 6 ರನ್ ಗಳಿಸಿ ಔಟ್ ಆಗಿದ್ದರು.
ಮಳೆ ಬಾಧಿತ ಬ್ರಿಸ್ಬೇನ್ ಪಂದ್ಯದಲ್ಲೂ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ 10 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು. ಈ ಪಂದ್ಯ ಡ್ರಾಗೊಳಿಸುವಲ್ಲಿ ಕೊನೆಗೂ ಭಾರತ ಯಶಸ್ವಿಯಾಗಿತ್ತು.
ನಂತರ ಮೆಲ್ಬರ್ನ್ ಪಂದ್ಯದಲ್ಲಿ ಮತ್ತೆ ಆರಂಭಿಕನಾಗಿ ಕಣಕ್ಕಿಳಿದರೂ ರೋಹಿತ್ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 3 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದರು.
ಈ ಪಂದ್ಯದಲ್ಲಿ 184 ರನ್ ಅಂತರದ ಸೋಲನುಭವಿಸಿದ್ದ ಟೀಮ್ ಇಂಡಿಯಾ ಸರಣಿಯಲ್ಲಿ 1-2ರ ಅಂತರದ ಹಿನ್ನಡೆ ಅನುಭವಿಸಿತ್ತು.
ಈಗ ಸರಣಿಯಲ್ಲಿ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನ ಬಳಿಯಲ್ಲಿಯೇ ಉಳಿಸಿಕೊಳ್ಳಲು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.