ಜಸ್‌ಪ್ರೀತ್ ಬೂಮ್ರಾ, ರೋಹಿತ್ ಶರ್ಮಾ
(ಪಿಟಿಐ ಸಂಗ್ರಹ ಚಿತ್ರ)
ಅಡಿಲೇಡ್: ಜಸ್‌ಪ್ರೀತ್ ಬೂಮ್ರಾ ಅವರೂ ಮನುಷ್ಯ. ಪ್ರತಿಬಾರಿಯೂ ತಂಡಕ್ಕೆ ಗೆಲುವು ತಂದುಕೊಡುವ ಹೊಣೆ ಅವರೊಬ್ಬರೇ ಹೊರಬೇಕಿಲ್ಲ. ಪಿಚ್‌ನ ಎರಡೂ ಕಡೆಯಿಂದ ಅವರೊಬ್ಬರೇ ಬೌಲಿಂಗ್ ನಿರ್ವಹಿಸಲು ಸಾಧ್ಯವಿಲ್ಲ. ಉಳಿದವರೂ ಜವಾಬ್ದಾರಿ ನಿಭಾಯಿಸಬೇಕು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡವು ಭಾನುವಾರ ಆಸ್ಟ್ರೇಲಿಯಾ ಎದುರು 10 ವಿಕೆಟ್‌ಗಳಿಂದ ಟೆಸ್ಟ್ ಪಂದ್ಯ ಸೋತ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ತಂಡದಲ್ಲಿ ಕೇವಲ ಒಬ್ಬ ಬೌಲರ್ ಇಲ್ಲ. ಬೇರೆ ಬೌಲರ್‌ಗಳೂ ಇದ್ದಾರೆ. ಅವರೂ ಜವಾಬ್ದಾರಿ ನಿಭಾಯಿಸಬೇಕು. ಅದು ಸಿರಾಜ್, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ಆಕಾಶ್ ದೀಪ್ ಅಥವಾ ಪ್ರಸಿದ್ಧ (ಕೃಷ್ಣ) ಅವರೆಲ್ಲರೂ ಇದ್ದಾರೆ’ ಎಂದು ಬೌಲಿಂಗ್ ವಿಭಾಗಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.
‘ಇದರಲ್ಲಿ ಕೆಲವರು ಈಗ ಟೆಸ್ಟ್ ಕ್ರಿಕೆಟ್‌ಗೆ ಬಂದಿದ್ದಾರೆ. ಅವರಿಗೆ ಅನುಭವ ಕಡಿಮೆ ಇದೆ. ಅವರಿಗೆ ಆತ್ಮವಿಶ್ವಾಸ ಬೆಳೆಯುವಂತೆ ಮಾಡಬೆಕು. ಅವರು ಪಂದ್ಯ ಆಡಲು ಕಣಕ್ಕಿಳಿದಾಗ ವಿಶ್ವಾಸವಿಟ್ಟು ನಡೆಸಿಕೊಳ್ಳಬೇಕು. ನಾವು ಸತತವಾಗಿ ಅವರೊಂದಿಗೆ ಯೋಜಿಸುತ್ತೇವೆ ಮತ್ತು ಚರ್ಚಿಸುತ್ತೇವೆ. ಆದರೆ ಬೂಮ್ರಾ ಅವರೊಬ್ಬರಿಂದಲೇ ಎಲ್ಲವನ್ನೂ ಬಯಸುವುದು ಸಾಧ್ಯವಿಲ್ಲ. ಬೆಳಿಗ್ಗೆ ಮತ್ತು ಸಂಜೆ, ಎರಡೂ ಬದಿಗಳಿಂದ ಅವರೇ ಬೌಲಿಂಗ್ ಮಾಡಲು ಆಗದು’ ಎಂದು ರೋಹಿತ್ ಹೇಳಿದರು.
‘ಕಾರ್ಯಭಾರ ನಿರ್ವಹಣೆ ಕುರಿತು ಹೆಚ್ಚು ನಿಗಾ ವಹಿಸುತ್ತೇವೆ. ಬೂಮ್ರಾ ಪ್ರತಿ ಸ್ಪೆಲ್ ಮುಗಿಸಿದಾಗಲೂ ಅವರೊಂದಿಗೆ ಮಾತನಾಡುತ್ತೇನೆ. ದೈಹಿಕ ಸ್ಥಿತಿಯ ಕುರಿತು ಅವರಿಂದಲೇ ಮಾಹಿತಿ ಪಡೆಯುತ್ತೇನೆ. ಇದು ಐದು ಪಂದ್ಯಗಳ ಸರಣಿ. ಬೂಮ್ರಾ ಎಲ್ಲ ಪಂದ್ಯಗಳಲ್ಲಿಯೂ ಆಡಬೇಕು. ಆದ್ದರಿಂದ ಅವರು ಹೆಚ್ಚು ಉಲ್ಲಸಿತರಾಗಿ ಮತ್ತು ಫಿಟ್ ಆಗಿ ಉಳಿಯಬೇಕು’ ಎಂದರು.
ಈ ಪಂದ್ಯದಲ್ಲಿ ಹರ್ಷಿತ್ ರಾಣಾ 16 ಓವರ್‌ಗಳಲ್ಲಿ 86 ರನ್ ನೀಡಿ ದುಬಾರಿಯಾದರು.
ಈ ಕುರಿತು ಪ್ರತಿಕ್ರಿಯಿಸಿದ ರೋಹಿತ್, ‘ಮೊದಲ ಟೆಸ್ಟ್‌ನಲ್ಲಿ ರಾಣಾ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಅಲ್ಲಿ ತಂಡಕ್ಕೆ ಮಹತ್ವದ ಸಂದರ್ಭದಲ್ಲಿ ವಿಕೆಟ್ ಗಳಿಸಿಕೊಟ್ಟರು. ಅವರು ಯಾವುದೇ ತಪ್ಪು ಮಾಡದೇ ಇದ್ದಾಗ ಅವಕಾಶ ಕೊಡಬೇಕಾಗುತ್ತದೆ. ಯಾವುದೇ ಕಾರಣವಿಲ್ಲದೇ ಅವರನ್ನು ಹೊರಕಳಿಸಲಾಗದು’ ಎಂದರು.
‘ಕೆಲವೊಮ್ಮೆ ಈ ರೀತಿಯಾಗುತ್ತದೆ. ತಂಡವು ಬಯಸಿದ್ದನ್ನು ಪಡೆಯಲು ಆಗದು. ಅವರು ಒಳ್ಳೆಯ ಬ್ಯಾಟರ್ ಎದುರು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಅವರಲ್ಲಿ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಒಂದೇ ಪಂದ್ಯದ ಫಲಿತಾಂಶದ ಆಧಾರದಲ್ಲಿ ಒಬ್ಬರ ಸಾಮರ್ಥ್ಯ ನಿರ್ಣಯಿಸುವುದು ತಪ್ಪು’ ಎಂದರು.
ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ನಡುವಣ ಮಾತಿನ ಚಕಮಕಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಆಕ್ರಮಣಶೀಲತೆ ಮತ್ತು ಅತಿಯಾದ ಆಕ್ರಮಣಕಾರಿ ಮನೋಭಾವಗಳ ನಡುವೆ ಬಹಳ ತೆಳುವಾದ ಗೆರೆ ಇರುತ್ತದೆ. ತಮ್ಮ ಮಿತಿಯನ್ನು ಆಟಗಾರರು ದಾಟದಂತೆ ನೋಡಿಕೊಳ್ಳುವುದ ನಾಯಕನಾಗಿ ನನ್ನ ಕೆಲಸ. ಪರಸ್ಪರ ಕೆಲವು ಮಾತುಗಳು ವಿನಿಮಯವಾಗಬಹುದು. ಸಿರಾಜ್ ಅವರಿಗೆ ತಮ್ಮ ಹೊಣೆಗಾರಿಕೆಯ ಅರಿವು ಇದೆ. ತಂಡಕ್ಕೆ ಏನು ಅವಶ್ಯ ಎಂಬುದರ ಕುರಿತು ಗೊತ್ತಿದೆ. ಅದನ್ನು ಅವರು ಕೊಡುತ್ತಾರೆ’ ಎಂದರು.
‘ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದಾಗಲೆಲ್ಲ ಇಂತಹ ಘಟನೆಗಳೂ ನಡೆಯುತ್ತವೆ. ಒಂದೇ ಘಟನೆಯನ್ನು ನೋಡುತ್ತಿರುವುದು ನನ್ನ ಕೆಲಸವಲ್ಲ. ಸಮಗ್ರವಾಗಿ ನೋಡಬೇಕು’ ಎಂದರು.
ಬ್ಯಾಟಿಂಗ್ ವಿಭಾಗದ ವೈಫಲ್ಯವನ್ನೂ ಒಪ್ಪಿಕೊಂಡ ರೋಹಿತ್, ‘ನಾವು ಆಸ್ಟ್ರೇಲಿಯಾದಲ್ಲಿ ಪಂದ್ಯ ಜಯಿಸಬೇಕಾದರೆ ಸ್ಕೋರ್‌ಬೋರ್ಡ್‌ನಲ್ಲಿ ಬಹಳಷ್ಟು ರನ್‌ಗಳನ್ನು ದಾಖಲಿಸಿರಬೆಕು. ಈ ಹಿಂದೆ ಅಂತಹದನ್ನು ನಾವು ಮಾಡಿದ್ದೇವೆ. ಉತ್ತಮ ಸ್ಕೋರ್ ಗಳಿಸಿದಾಗ ಎದುರಾಳಿಯ ಮೇಲೆ ಒತ್ತಡ ಹೆಚ್ಚಿಸಲು ಸಾಧ್ಯವಾಗುತ್ತದೆ’ ಎಂದರು.
‘ನಾವು ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿಲ್ಲ. ಅದು ಅತೀವ ಬೇಸರದ ಸಂಗತಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಇನ್ನೂ 30–40 ರನ್‌ಗಳನ್ನಾದರೂ ಹೆಚ್ಚು ಗಳಿಸಬೇಕಾಗಿತ್ತು’ ಎಂದರು.
ಈ ಪಂದ್ಯದಲ್ಲಿ ಭಾರತ ತಂಡವು ಎರಡೂ ಇನಿಂಗ್ಸ್‌ಗಳಲ್ಲಿ 200 ರನ್‌ಗಳ ಗಡಿ ಯನ್ನು ದಾಟಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.