ನಿತೀಶ್ ಕುಮಾರ್ ರೆಡ್ಡಿ
(ಎಕ್ಸ್ ಚಿತ್ರ)
ಮೆಲ್ಬರ್ನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ, ಚೊಚ್ಚಲ ಶತಕದ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ನಿತೀಶ್ ಶತಕ ಗಳಿಸುವ ಮೂಲಕ ಭಾರತಕ್ಕೆ ಆಪದ್ಬಾಂಧವ ಎನಿಸಿದ್ದಾರೆ.
ಅರ್ಧಶತಕ ಗಳಿಸಿದ ಬೆನ್ನಲ್ಲೇ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ 'ತಗ್ಗೋದೆ ಇಲ್ಲ' ಎಂಬ ಶೈಲಿಯಲ್ಲಿ ಸಂಭ್ರಮಿಸಿದ ನಿತೀಶ್, ಬಳಿಕ ಶತಕ ಗಳಿಸಿದಾಗ ಬಾಹುಬಲಿಯ ಪ್ರಭಾಸ್ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ.
ನಿತೀಶ್ ಕುಮಾರ್ ಶತಕವನ್ನು ಅಲ್ಲೇ ಪಕ್ಕದಲ್ಲಿ ಗ್ಯಾಲರಿಯಲ್ಲಿ ಕುಳಿತುಕೊಂಡು ವೀಕ್ಷಿಸುತ್ತಿದ್ದ ತಂದೆ ಕಣ್ತುಂಬಿಕೊಂಡರು.
ಒಂದು ಹಂತದಲ್ಲಿ ಭಾರತ 221 ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ವಾಷಿಂಗ್ಟನ್ ಸುಂದರ್ ಅವರೊಂದಿಗೆ ಜತೆಗೂಡಿದ ನಿತೀಶ್, ಎಂಟನೇ ವಿಕೆಟ್‌ಗೆ 127 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.
ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ನಿತೀಶ್-ವಾಷ್ಟಿಂಗನ್ ಜೋಡಿ ಭಾರತವನ್ನು ಫಾಲೋ ಆನ್‌ನಿಂದ ಪಾರಾಗಲು ನೆರವಾದರು.
21 ವರ್ಷದ ನಿತೀಶ್ ಕುಮಾರ್, ಆಸ್ಟ್ರೇಲಿಯಾ ನೆಲದಲ್ಲಿ ಶತಕ ಗಳಿಸಿದ ಭಾರತದ ಮೂರನೇ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ. 1992ರಲ್ಲಿ ಸಚಿನ್ ತೆಂಡೂಲ್ಕರ್ 18ನೇ ಹರೆಯದಲ್ಲಿ ಸಿಡ್ನಿಯಲ್ಲಿ ಶತಕ ಗಳಿಸಿದ್ದರು. 2019ರಲ್ಲಿ ರಿಷಭ್ ಪಂತ್ ಸಿಡ್ನಿಯಲ್ಲೇ ತಮ್ಮ 21ನೇ ವಯಸ್ಸಿನಲ್ಲಿ ಸೆಂಚುರಿ ಬಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.