ADVERTISEMENT

IND vs ENG: ರೋಹಿತ್ 161, ರಹಾನೆ 67; ಮೊದಲ ದಿನದಂತ್ಯಕ್ಕೆ ಭಾರತ 300/6

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2021, 12:04 IST
Last Updated 13 ಫೆಬ್ರುವರಿ 2021, 12:04 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಮೋಘ ಶತಕದ (161) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 88 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿದೆ.

ರೋಹಿತ್‌ಗೆ ಉತ್ತಮ ಬೆಂಬಲ ನೀಡಿದ ಉಪ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕದ (67) ಸಾಧನೆ ಮಾಡಿದರು.

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಹಿಂದಿನ ಪಿಚ್‌ಗೆ ವಿರುದ್ಧವಾಗಿ ಬೌಲರ್‌ಗಳಿಗೆ ಆರಂಭದಿಂದಲೇ ನೆರವು ದೊರಕಿತ್ತು.

ADVERTISEMENT

ಪರಿಣಾಮ ದ್ವಿತೀಯ ಓವರ್‌ನಲ್ಲೇ ಶುಭಮನ್ ಗಿಲ್ (0) ವಿಕೆಟ್ ಕಳೆದುಕೊಂಡ ಭಾರತ ಹಿನ್ನೆಡೆಗೊಳಗಾಯಿತು. ಬಳಿಕ ಚೇತೇಶ್ವರ ಪೂಜಾರ (21) ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರು.

ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ರೋಹಿತ್, ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಶೈಲಿಯನ್ನು ನೆನಪಿಸಿದರು. ಅಲ್ಲದೆ ಮೊದಲ ಅವಧಿಯಲ್ಲೇ 80 ರನ್ ಸೊರೆಗೈದರು.

ರೋಹಿತ್ ಹಾಗೂ ಪೂಜಾರ ದ್ವಿತೀಯ ವಿಕೆಟ್‌ಗೆ 85 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಆದರೆ ಪೂಜಾರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಸಹ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರೊಂದಿಗೆ 86 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಒಳಗಾಗಿತ್ತು.

ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕ ಸಾಧನೆ ಮಾಡಿದರು. ಈ ಎಲ್ಲ ಶತಕಗಳುಭಾರತದಲ್ಲೇ ದಾಖಲಿರುವುದು ವಿಶೇಷ.

ಆಂಗ್ಲರ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರು. ಇವರಿಗೆ ಉಪನಾಯಕ ಅಜಿಂಕ್ಯ ರಹಾನೆ ಸಾಥ್ ನೀಡಿದರು. ಅಲ್ಲದೆ ಪಂದ್ಯದ ದ್ವಿತೀಯ ಅವಧಿಯಲ್ಲಿ ಯಾವುದೇ ವಿಕೆಟ್ ನಷ್ಟವಾಗದಂತೆ ನೋಡಿಕೊಂಡರು.

ರೋಹಿತ್ ಹಾಗೂ ರಹಾನೆ ನಾಲ್ಕನೇ ವಿಕೆಟ್‌ಗೆ 162 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಈ ಮಧ್ಯೆ ರೋಹಿತ್ 150ರ ಗಡಿಯನ್ನು ದಾಟಿದರು. ರಹಾನೆ ಕೂಡಾ ಆಕರ್ಷಕ ಅರ್ಧಶತಕ ಬಾರಿಸಿದರು.

ರೋಹಿತ್ ಶರ್ಮಾ 7ನೇ ಟೆಸ್ಟ್ ಶತಕ

ಆದರೆ ದಿನದ ಕೊನೆಯ ಅವಧಿಯಲ್ಲಿ ರೋಹಿತ್ ಹಾಗೂ ರಹಾನೆ ವಿಕೆಟ್ ಕಳೆದುಕೊಂಡ ಭಾರತ ಮಗದೊಮ್ಮೆ ಹಿನ್ನಡೆ ಅನುಭವಿಸಿತು. 231 ಎಸೆತಗಳನ್ನು ಎದುರಿಸಿದ ರೋಹಿತ್ 18 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 161 ರನ್ ಗಳಿಸಿದರು. ಇನ್ನೊಂದೆಡೆ 149 ಎಸೆತಗಳನ್ನು ಎದುರಿಸಿದ ರಹಾನೆ ಒಂಬತ್ತು ಬೌಂಡರಿಗಳಿಂದ 67 ರನ್ ಗಳಿಸಿದರು.

ಕೊನೆಯಲ್ಲಿ ರಿಷಭ್ ಪಂತ್ 33 ರನ್ ಗಳಿಸಿ ಅಜೇಯರಾಗುಳಿದರು. ಇನ್ನೊಂದೆಡೆ ರಿವಿಚಂದ್ರನ್ ಅಶ್ವಿನ್ (13) ವಿಕೆಟ್ ಕೂಡಾ ಭಾರತಕ್ಕೆ ನಷ್ಟವಾಗಿತ್ತು. ಪಂತ್‌ಗೆ ಸಾಥ್ ನೀಡುತ್ತಿರುವ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (5*) ಕ್ರೀಸಿನಲ್ಲಿದ್ದಾರೆ.

ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಹಾಗೂ ಮೊಯಿನ್ ಅಲಿ ತಲಾ ಎರಡು ಮತ್ತು ಒಲ್ಲಿ ಸ್ಟೋನ್ ಹಾಗೂ ನಾಯಕ ಜೋ ರೂಟ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 227 ರನ್ ಅಂತರದ ಬೃಹತ್ ಗೆಲುವು ದಾಖಲಿಸಿರುವ ಇಂಗ್ಲೆಂಡ್ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.