
ವಡೋದರ: ಗಾಯಗೊಂಡಿರುವ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಧ್ರುವ್ ಜುರೇಲ್ ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.
ಏಕದಿನ ಸರಣಿಯು ಇಂದಿನಿಂದ (ಭಾನುವಾರ) ಆರಂಭವಾಗಲಿದೆ.
ಶನಿವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವಾಗ ಪಂತ್ ಗಾಯಗೊಂಡಿದ್ದರು.
'ವಡೋದರದಲ್ಲಿರುವ ಬಿಸಿಎ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ತಾಲೀಮು ನಡೆಸುತ್ತಿದ್ದ ವೇಳೆ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಪೆಕ್ಕೆಲುಬಿಗೆ ಚೆಂಡು ಬಡಿದಿತ್ತು' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
'ಕೂಡಲೇ ಅವರನ್ನೂ ಎಂಆರ್‌ಐ ಸ್ಕಾನ್‌ಗೆ ಕರೆದೊಯ್ಯಲಾಯಿತು. ಬಿಸಿಸಿಐನ ವೈದ್ಯಕೀಯ ತಂಡವು ರೇಡಿಯೋಲಾಜಿಕಲ್ ತಜ್ಞರೊಂದಿಗೆ ಚರ್ಚೆ ನಡೆಸಿದೆ. ಸ್ನಾಯುವಿಗೆ ಬಲವಾದ ಪೆಟ್ಟು ಬಿದ್ದಿರುವುದು ಕಂಡು ಬಂದಿದೆ. ಹೀಗಾಗಿ, ಅವರು ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ' ಎಂದೂ ಮಾಹಿತಿ ನೀಡಿವೆ.
ತಂಡದ ಆಯ್ಕೆ ಸಮಿತಿಯು ಪಂತ್ ಬದಲಿಗೆ ಧ್ರುವ್ ಜುರೆಲ್ ಅವರನ್ನು ಆಯ್ಕೆ ಮಾಡಿದೆ. ಜುರೆಲ್ ಅವರು ತಂಡದೊಂದಿಗೆ ಸಂಪರ್ಕದಲ್ಲಿದ್ದಾರೆ. ಏಕದಿನ ತಂಡದಲ್ಲಿ ಅವರು ಮೀಸಲು ವಿಕೆಟ್ ಕೀಪರ್ - ಬ್ಯಾಟರ್ ಆಗಿರಲಿದ್ದಾರೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತರ ಪ್ರದೇಶ ಪರ 7 ಪಂದ್ಯ ಆಡಿರುವ ಜುರೇಲ್, ಎರಡು ಶತಕ ಸಹಿತ 558 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಹೀಗಿದೆ
ಶುಭಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್ (ವಿಕೆಟ್ ಕೀಪರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.