ADVERTISEMENT

IND vs NZ | ಏಕದಿನ ಸರಣಿಯಲ್ಲಿ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ರಾಹುಲ್?

ಏಜೆನ್ಸೀಸ್
Published 4 ಫೆಬ್ರುವರಿ 2020, 9:45 IST
Last Updated 4 ಫೆಬ್ರುವರಿ 2020, 9:45 IST
   

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಗ್ರಕ್ರಮಾಂಕದಲ್ಲಿಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಕನ್ನಡಿಗ ಕೆ.ಎಲ್‌.ರಾಹುಲ್‌,ಏಕದಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಟಿ20 ಸರಣಿಯಲ್ಲಿಉಪನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ್ದ ರಾಹುಲ್‌ ಐದು ಪಂದ್ಯಗಳಿಂದ 224 ರನ್‌ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅವರ ಆಟದ ಬಲದಿಂದ ಐದು ಪಂದ್ಯಗಳಚುಟುಕು ಕ್ರಿಕೆಟ್‌ ಸರಣಿಯನ್ನು ವಿರಾಟ್‌ ಕೊಹ್ಲಿ ಪಡೆ ಕ್ಲೀನ್‌ ಸ್ವೀಪ್‌ ಮಾಡಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಭಾರತದಆರಂಭಿಕ ಜೋಡಿರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಮೀನಖಂಡದ ತೀವ್ರ ನೋವಿನಿಂದ ಬಳಲುತ್ತಿರುವ ರೋಹಿತ್‌ ಬದಲು ಮಯಂಕ್‌ ಅಗರವಾಲ್‌ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ಧವನ್‌ ಬದಲುಪೃಥ್ವಿ ಶಾ ಅವರಿಗೆ ಸ್ಥಾನ ನೀಡಲಾಗಿದೆ.

ADVERTISEMENT

ಏಕದಿನ ಸರಣಿಯು ನಾಳೆಯಿಂದಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ. ಹಾಗಾಗಿ ತಂಡದಬದಲಾವಣೆ ಮತ್ತು ಗಾಯದ ಸಮಸ್ಯೆ ಬಗ್ಗೆ ಮಾತನಾಡಿರುವ ಕೊಹ್ಲಿ, ‘ಏಕದಿನ ಸರಣಿಗೆ ರೋಹಿತ್‌ ಶರ್ಮಾ ತಂಡದಲ್ಲಿ ಇಲ್ಲದೇ ಇರುವುದು ದುರದೃಷ್ಟಕರ.ಈ ಸರಣಿ ಬಳಿಕ ಯಾವುದೇ ಏಕದಿನ ಟೂರ್ನಿಇಲ್ಲದಿರುವುದರಿಂದ ರೋಹಿತ್‌ಗೆ ಚೇತರಿಸಿಕೊಳ್ಳಲುಒಳ್ಳೆಯ ಸಮಯವಾಗಿದೆ. ಏಕದಿನ ಸರಣಿಯಲ್ಲಿ ಪೃಥ್ವಿ ಶಾ ಇನಿಂಗ್ಸ್‌ ಆರಂಭಿಸಲಿದ್ದಾರೆ. ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಆತ (ರಾಹುಲ್‌) ಮಧ್ಯಮ ಕ್ರಮಾಂಕಕ್ಕೆ ಒಗ್ಗಿಕೊಳ್ಳಬೇಕಿದೆ’ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಯಾಸದ ಗೆಲುವು ಸಾಧಿಸಿರುವುದರಿಂದ ಪ್ರದರ್ಶನದಲ್ಲಿ ಮತ್ತಷ್ಟು ಸುಧಾರಣೆ ತಂದುಕೊಳ್ಳಬೇಕಿದೆಎಂದಿದ್ದಾರೆ.

‘ಆಸ್ಟ್ರೇಲಿಯಾ ವಿರುದ್ಧದಏಕದಿನ ಸರಣಿಯಲ್ಲಿ ಕಠಿಣ ಸವಾಲು ಎದುರಿಸಿದೆವು. ನಾವು ಮೊದಲ ಪಂದ್ಯವನ್ನು ಸೋತಿದ್ದೆವು. ಆದರೆ ಬಳಿಕ ಉತ್ತಮವಾಗಿ ಆಡಿ ಸರಣಿಯನ್ನು 2–1ರಿಂದ ವಶಪಡಿಸಿಕೊಂಡೆವು. ಆ ಸರಣಿಯಿಂದ ಸಾಕಷ್ಟು ಆತ್ಮ ವಿಶ್ವಾಸ ಗಳಿಸಿಕೊಂಡಿದ್ದೇವೆ. ನಾವು ಸಕಾರಾತ್ಮಕವಾಗಿ ಆಡಲು ಪ್ರಯತ್ನಿಸುತ್ತೇವೆ. ನಮ್ಮ ಯೋಜನೆಯ ಮೇಲೆ ನಂಬಿಕೆ ಇದೆ. ನ್ಯೂಜಿಲೆಂಡ್‌ ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬುದು ಗೊತ್ತಿದೆ. ಅದಕ್ಕನುಗುಣವಾಗಿ ಆಡಬೇಕಿದೆ’ ಎಂದು ಹೇಳಿದ್ದಾರೆ.

ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್‌ನಲ್ಲಿ ಮತ್ತು ಮೂರನೇ ಪಂದ್ಯ ಮೌಂಟ್‌ ಮಾಂಗನೂಯಿಯಲ್ಲಿ ನಡೆಯಲಿದೆ.ಟೆಸ್ಟ್ ಪಂದ್ಯಗಳು ಫೆ.21 ಹಾಗೂ ಫೆ.29ರಿಂದ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.