ADVERTISEMENT

WTC Final: ರೋಹಿತ್ vs ಬೌಲ್ಟ್ ರೋಚಕ ಕದನದ ಕಾತರದಲ್ಲಿ ವೀರು

ಪಿಟಿಐ
Published 12 ಜೂನ್ 2021, 8:36 IST
Last Updated 12 ಜೂನ್ 2021, 8:36 IST
ಟ್ರೆಂಟ್ ಬೌಲ್ಟ್ vs ರೋಹಿತ್ ಶರ್ಮಾ
ಟ್ರೆಂಟ್ ಬೌಲ್ಟ್ vs ರೋಹಿತ್ ಶರ್ಮಾ   

ನವದೆಹಲಿ: ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ನಡುವಣ ರೋಚಕ ಹಣಾಹಣಿಯನ್ನು ಎದುರು ನೋಡುತ್ತಿರುವುದಾಗಿ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಎಡಗೈ ವೇಗಿ ಬೌಲ್ಟ್ ಎಸೆಯುವ ಉರಿ ಚೆಂಡಿಗೆ ರೋಹಿತ್ ಹೇಗೆ ಉತ್ತರಿಸಲಿದ್ದಾರೆ ಎಂಬುದು ಅತ್ಯಂತ ಕುತೂಹಲವನ್ನು ಕೆರಳಿಸಿದೆ ಎಂದು ವೀರು ತಿಳಿಸಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಚೊಚ್ಚಲ ಡಬ್ಲ್ಯು‌ಟಿಸಿ ಫೈನಲ್ ಪಂದ್ಯವು ಜೂನ್ 18ರಿಂದ 22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ನಡೆಯಲಿದೆ.

ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ದಾಂಡಿಗನ ಆಟದ ವೈಖರಿಯನ್ನೇ ಬದಲಾಯಿಸಿರುವ ಸೆಹ್ವಾಗ್, ಇತ್ತೀಚೆಗಿನ ಸರಣಿಗಳಲ್ಲಿ ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ತೋರಿರುವ ಸಾಮರ್ಥ್ಯವು ಇಂಗ್ಲೆಂಡ್ ನೆಲದಲ್ಲೂ ಯಶಸ್ಸು ಸಿಗಲು ನೆರವಾಗಲಿದೆ ಎಂದಿದ್ದಾರೆ.

ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಭಾರತಕ್ಕೆ ಅನೇಕ ಸವಾಲುಗಳನ್ನು ಒಡ್ಡಲಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅವರು ಚೆಂಡನ್ನು ಎರಡೂ ದಿಕ್ಕಿಗೂ ತಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಜತೆಯಾಗಿ ದಾಳಿ ಮಾಡುವಾಗ ಮತ್ತಷ್ಟು ಅಪಾಯಕಾರಿಯಾಗಬಲ್ಲರು ಎಂದಿದ್ದಾರೆ.

ನಾನು ರೋಹಿತ್ ಹಾಗೂ ಬೌಲ್ಟ್ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ. ಬೌಲ್ಟ್ ಆರಂಭಿಕ ಸ್ಪೆಲ್ ಎದುರಿಸಿ ರೋಹಿತ್ ಸೆಟ್ ಆದರೆ ಪಂದ್ಯ ನೋಡುವುದು ಮತ್ತಷ್ಟು ಮುದವನ್ನು ನೀಡಲಿದೆ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲೂ ಆರಂಭಿಕನಾಗಿ ರೋಹಿತ್ ಕಣಕ್ಕಿಳಿಯಲಿದ್ದಾರೆ. ಹಾಗಿದ್ದರೂ 2014ರ ಪ್ರವಾಸದ ಅನುಭವದ ನೆರವು ಪಡೆಯಲಿದ್ದಾರೆ ಎಂದು ವೀರು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಅಧ್ಭುತ ಬ್ಯಾಟ್ಸ್‌ಮನ್. 2014ರಲ್ಲೂ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಇತ್ತೀಚಿಗಿನ ಸರಣಿಗಳಲ್ಲಿ ಆರಂಭಿಕನಾಗಿ ಆಡಿದ್ದು, ಉತ್ತಮ ನಿರ್ವಹಣೆ ನೀಡಿದ್ದಾರೆ. ಇಂಗ್ಲೆಂಡ್‌ನಲ್ಲೂ ರನ್ ಗಳಿಸಲಿದ್ದಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ ಎಂದಿದ್ದಾರೆ.

ಇದನ್ನೂ ಓದಿ:

ನಿಸ್ಸಂಶಯವಾಗಿಯೂ ಯಾವುದೇ ಆರಂಭಿಕ ಬ್ಯಾಟ್ಸ್‌ಮನ್ ಮೊದಲ 10 ಓವರ್‌ಗಳಲ್ಲಿ ಜಾಗರೂಕರಾಗಿ ಬ್ಯಾಟಿಂಗ್ ಮಾಡಬೇಕು. ಹೊಸ ಚೆಂಡು ಹಾಗೂ ಪರಿಸ್ಥಿತಿಯನ್ನು ಗ್ರಹಿಸಬೇಕು. ಬಳಿಕ ತಮ್ಮ ನೈಜ ಆಟವನ್ನು ಪ್ರದರ್ಶಿಸಲಿದ್ದಾರೆ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ಹೊರತಾಗಿಯೂ ರಿಷಬ್ ಪಂತ್ ಕೂಡಾ ಉತ್ತಮ ನಿರ್ವಹಣೆ ನೀಡುವ ನಂಬಿಕೆಯಿದೆ ಎಂದು ವೀರು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.