ADVERTISEMENT

ಬೌಂಡರಿ ಸೇವ್; ಟೀಮ್ ಇಂಡಿಯಾ ಪಾಲಿಗೆ ಹೀರೊ ಆದ ಸಂಜು ಸ್ಯಾಮ್ಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2022, 10:14 IST
Last Updated 23 ಜುಲೈ 2022, 10:14 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಪೋರ್ಟ್ ಆಫ್ ಸ್ಪೇನ್: ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮೂರು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ.

ಈ ನಡುವೆ ಬ್ಯಾಟಿಂಗ್‌ನಲ್ಲಿ ಮಿಂಚಲು (12 ರನ್) ಸಾಧ್ಯವಾಗದಿದ್ದರೂ ಅದ್ಭುತ ವಿಕೆಟ್ ಕೀಪಿಂಗ್ ಕೌಶಲ್ಯ ಮೆರೆದಿರುವ ಸಂಜು ಸ್ಯಾಮ್ಸನ್ ತಂಡಕ್ಕಷ್ಟೇ ಅಲ್ಲದೆ ಅಭಿಮಾನಿಗಳ ಪಾಲಿಗೂ ಹೀರೊ ಎನಿಸಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಾಯಕ ಶಿಖರ್ ಧವನ್ (97 ರನ್), ಶುಭಮನ್ ಗಿಲ್ (64) ಹಾಗೂ ಶ್ರೇಯಸ್ ಅಯ್ಯರ್ (54) ಆಕರ್ಷಕ ಅರ್ಧಶತಕಗಳ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ವಿಂಡಿಸ್ ಕೈಲ್ ಮೇಯರ್ಸ್ (75), ಶಾಮ್ರಾ ಬ್ರೂಕ್ಸ್ (54) ಹಾಗೂ ಬ್ರೆಂಡನ್ ಕಿಂಗ್ (54) ಉತ್ತಮ ಆಟದ ನೆರವಿನಿಂದ ಗೆಲುವಿನತ್ತ ದಿಟ್ಟ ಹೆಜ್ಜೆಯನ್ನಿಟ್ಟಿತ್ತು. ಕೊನೆಗೆ ಅಕೀಲ್ ಹುಸೇನ್ (32*) ಹಾಗೂ ರೊಮರಿಯೊ ಶೆಫಾರ್ಡ್ (39*) ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾಗಿ ಹೋರಾಟ ತೋರಿದರು.

ಆದರೆ ಮೊಹಮ್ಮದ್ ಸಿರಾಜ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ವಿಕೆಟ್ ಹಿಂದುಗಡೆ ಸಂಜು ಅಮೋಘ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಮೆರೆಯುವ ಮೂಲಕ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ವಿಂಡೀಸ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 15 ಹಾಗೂ ಕೊನೆಯ ಎರಡು ಎಸೆತಗಳಲ್ಲಿ 8 ರನ್ ಬೇಕಿತ್ತು. ಆದರೆ ಸಿರಾಜ್ ಲೆಗ್ ಸ್ಟಂಪ್ ಆಚೆಗೆ ಎಸೆದ ವೈಡ್ ಎಸೆತವನ್ನು ತನ್ನ ಎಡಭಾಗದತ್ತ ಡೈವ್ ಹೊಡೆದು ಹಿಡಿದ ಸಂಜು, ಚೆಂಡು ಬೌಂಡರಿಗೆ ಹೋಗುವುದನ್ನು ತಡೆಗಟ್ಟಿದರು. ಈ ಮೂಲಕ ವಿಂಡೀಸ್‌ಗೆ ಕನಿಷ್ಠ ನಾಲ್ಕು ರನ್‌ ನಿರಾಕರಿಸಿದರು.

ಇದುವೇ ಪಂದ್ಯದ ಫಲಿತಾಂಶದ ವ್ಯತ್ಯಾಸಕ್ಕೂ ಕಾರಣವಾಯಿತು. ಪರಿಣಾಮ ಭಾರತ ಮೂರು ರನ್ ಅಂತರದ ಗೆಲುವು ದಾಖಲಿಸಲು ಸಾಧ್ಯವಾಯಿತು.

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸೇರಿದಂತೆ ಪ್ರಮುಖರು, ಭಾರತದ ಗೆಲುವಿಗೆ ಸಂಜು ಅಮೋಘ ವಿಕೆಟ್ ಕೀಪಿಂಗ್ ಕಾರಣ ಎಂದು ಹಾಡಿ ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.