ADVERTISEMENT

T20 WC | ಸೆಮಿಯಲ್ಲಿ ಮುಗ್ಗರಿಸಿದ ಭಾರತ; ಫೈನಲ್‌ಗೆ ಆಸ್ಟ್ರೇಲಿಯಾ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2023, 17:18 IST
Last Updated 23 ಫೆಬ್ರುವರಿ 2023, 17:18 IST
ಆಸ್ಟ್ರೇಲಿಯಾ ಆಟಗಾರ್ತಿಯರ ಸಂಭ್ರಮ (ಚಿತ್ರಕೃಪೆ: @T20WorldCup)
ಆಸ್ಟ್ರೇಲಿಯಾ ಆಟಗಾರ್ತಿಯರ ಸಂಭ್ರಮ (ಚಿತ್ರಕೃಪೆ: @T20WorldCup)   

ಕೇಪ್‌ಟೌನ್: ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ರನೌಟ್ ಆಗುವ ಮೂಲಕ ಭಾರತ ತಂಡವು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ತಲುಪುವ ಕನಸು ಕಮರಿತು. ಆಸ್ಟ್ರೇಲಿಯಾ ಐದು ರನ್‌ಗಳಿಂದ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತು.

173 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಗೆಲುವಿನಂಚಿನಲ್ಲಿ ಮುಗ್ಗರಿಸಿತು. ಅಗ್ರ ಮೂವರು ಬ್ಯಾಟರ್‌ಗಳು ಒಂದಂಕಿ ಗಳಿಸಿ ಔಟಾದರೂ ಹರ್ಮನ್‌ಪ್ರೀತ್ (52; 34ಎ) ತಂಡಕ್ಕೆ ಆಸರೆಯಾದರು. ಗೆಲುವಿನ ಆಸೆ ಚಿಗುರಿಸಿದ್ದರು. ಅವರು ಜೆಮಿಮಾ ರಾಡ್ರಿಗಸ್ (43; 24ಎ) ಅವರೊಡಗೂಡಿ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 69 ರನ್‌ ಸೇರಿಸಿದರು. ಐದನೇ ವಿಕೆಟ್ ಜೊತೆಯಾಟದಲ್ಲಿಯೂ ಹರ್ಮನ್ ಅವರು ರಿಚಾ ಘೋಷ್ ಜೊತೆಗೆ 36 ರನ್ ಸೇರಿಸಿದರು. ಇದರಿಂದಾಗಿ ಭಾರತ ತಂಡದ ಗೆಲುವು ಸುಲಭ ಎನಿಸತೊಡಗಿತ್ತು.

ಇಡೀ ಟೂರ್ನಿಯಲ್ಲಿ ಲಯ ಕಂಡುಕೊಳ್ಳಲು ಹೆಣಗಾಡಿದ್ದ ಹರ್ಮನ್ ಅಮೋಘವಾಗಿ ಆಡುತ್ತಿದ್ದರು. ಆದರೆ 15ನೇ ಓವರ್‌ನಲ್ಲಿ ಅವರಿಗೆ ಅದೃಷ್ಟ ಕೈಕೊಟ್ಟಿತು. ರನ್‌ ತೆಗೆದುಕೊಳ್ಳುವಾಗ ಕ್ರೀಸ್‌ನಿಂದ ಒಂದು ಗೇಣಿನಷ್ಟು ಮೊದಲು ಹರ್ಮನ್ ಅವರ ಬ್ಯಾಟ್ ಹುಲ್ಲಿನ ಎಸಳಿದ್ದ ಮಣ್ಣಿನಲ್ಲಿ ಸಿಕ್ಕಿಕೊಂಡಿತು. ಅವರು ಕ್ರೀಸ್‌ನೊಳಗೆ ಕಾಲಿಡುವಷ್ಟರಲ್ಲಿ ಫೀಲ್ಡರ್ ಗಾರ್ಡನರ್ ಥ್ರೋ ಮಾಡಿದ ಚೆಂಡನ್ನು ಸಂಗ್ರಹಿಸಿದ ವಿಕೆಟ್‌ಕೀಪರ್ ಅಲಿಸಾ ಹೀಲಿ ಬೇಲ್ಸ್‌ ಎಗರಿಸಿದರು. ಟಿ.ವಿ. ಅಂಪೈರ್‌ ರನೌಟ್ ಖಚಿತಪಡಿಸಿದರು. ಡಗೌಟ್‌ಗೆ ಮರಳುವ ಹಾದಿಯಲ್ಲಿ ಹರ್ಮನ್‌ ಹತಾಶೆಯಿಂದ ಬ್ಯಾಟ್ ಬೀಸಾಕಿದ್ದೂ ಆಯಿತು.

ADVERTISEMENT

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ರಿಚಾ ಘೋಷ್ ಜೊತೆಗೂಡಿದ ದೀಪ್ತಿ ಶರ್ಮಾ ತಂಡವನ್ನು ಗೆಲುವಿನ ಗೆರೆ ದಾಟಿಸುವ ಭರವಸೆ ಮೂಡಿಸಿದ್ದರು. ಡಾರ್ಸಿ ಬ್ರೌನ್ ಬೌಲಿಂಗ್‌ನಲ್ಲಿ ರಿಚಾ ಔಟಾದರು. ಉಳಿದ ಬ್ಯಾಟರ್‌ಗಳ ಪ್ರಯತ್ನ ಸಾಕಾಗಲಿಲ್ಲ. ಭಾರತದ ಗೆಲುವಿಗೆ ಇನಿಂಗ್ಸ್‌ನ ಕೊನೆಯ ಮೂರು ಓವರ್‌ಗಳಲ್ಲಿ 31 ರನ್‌ಗಳ ಅಗತ್ಯವಿತ್ತು.

ಆದರೆ, ಆಸ್ಟ್ರೇಲಿಯಾದ ಬೌಲರ್‌ಗಳಾದ ಮೇಘನ್ ಶುಟ್, ಜೆಸ್ ಜಾನ್ಸನ್ ಹಾಗೂ ಗಾರ್ಡನರ್ ಅವರು ತಲಾ ಒಂದು ಓವರ್ ಬೌಲಿಂಗ್ ಮಾಡಿದರು. ಈ ಮೂರು ಓವರ್‌ಗಳಲ್ಲಿ ಭಾರತಕ್ಕೆ ಲಭಿಸಿದ್ದು 26 ರನ್‌ಗಳು ಮಾತ್ರ. ಭಾರತಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 167 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

ಮೂನಿ ಅರ್ಧಶತಕ: ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಬ್ಯಾಟರ್‌ಗಳು ಭಾರತದ ಬೌಲರ್‌ಗಳನ್ನು ದಂಡಿಸಿದರು. ಅದರಲ್ಲೂ ಬೆಥ್ ಮೂನಿ
(54 ರನ್) ಚೆಂದದ ಅರ್ಧಶತಕ ದಾಖಲಿಸುವ ಮೂಲಕ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 172 ರನ್‌ ಗಳಿಸಲು ಸಾಧ್ಯವಾಯಿತು. ಅವರಿಗೆ ಮೆಗ್ ಲ್ಯಾನಿಂಗ್ ಹಾಗೂ ಗಾರ್ಡನರ್ ಉತ್ತಮ ಜೊತೆ ನೀಡಿದರು.

ಈ ಹಂತದಲ್ಲಿ ಭಾರತದ ಬೌಲರ್‌ಗಳು ಬಿಗಿ ದಾಳಿ ನಡೆಸಲಿಲ್ಲ. ಫೀಲ್ಡಿಂಗ್ ಕೂಡ ಚುರುಕಾಗಿರಲಿಲ್ಲ. ಇದರಿಂದಾಗಿ ಆಸ್ಟ್ರೇಲಿಯಾಕ್ಕೆ
ದೊಡ್ಡ ಮೊತ್ತ ಗಳಿಸಲು
ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 172 (ಅಲೀಸಾ ಹೀಲಿ 25, ಬೆಥ್ ಮೂನಿ 54, ಮೆಗ್ ಲ್ಯಾನಿಂಗ್ ಔಟಾಗದೆ 49, ಆ್ಯಷ್ಲೆ ಗಾರ್ಡನರ್ 31, ಶಿಖಾ ಪಾಂಡೆ 32ಕ್ಕೆ2, ರಾಧಾ ಯಾದವ್ 35ಕ್ಕೆ1, ದೀಪ್ತಿ ಶರ್ಮಾ 30ಕ್ಕೆ1) ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 167 (ಜೆಮಿಮಾ ರಾಡ್ರಿಗಸ್ 43, ಹರ್ಮನ್‌ಪ್ರೀತ್ ಕೌರ್ 52,ದೀಪ್ತಿ ಶರ್ಮಾ ಔಟಾಗದೆ 20, ಆ್ಯಷ್ಲೆ ಗಾರ್ಡನರ್ 37ಕ್ಕೆ2, ಡಾರ್ಸಿ ಬ್ರೌನ್ 18ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 5 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.