ADVERTISEMENT

Ind vs Ire 1st T20: ದೀಪಕ್‌ ಹೂಡಾ ಅಬ್ಬರ, ಭಾರತಕ್ಕೆ 7 ವಿಕೆಟ್‌ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2022, 2:04 IST
Last Updated 27 ಜೂನ್ 2022, 2:04 IST
ಭಾರತದ ತಂಡದ ಗೆಲುವಿನ ಸಂಭ್ರಮ
ಭಾರತದ ತಂಡದ ಗೆಲುವಿನ ಸಂಭ್ರಮ   

ಡಬ್ಲಿನ್‌: ಭಾನುವಾರ ಡಬ್ಲಿನ್‌ನಲ್ಲಿ ನಡೆದ ಭಾರತ ಮತ್ತು ಐರ್ಲೆಂಡ್‌ ನಡುವಿನ ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

ಹಾರ್ದಿಕ್ ಪಾಂಡ್ಯಾ ನೇತೃತ್ವದ ಭಾರತ ತಂಡವು ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮಳೆಯ ಕಾರಣ ತಡವಾಗಿ ಆರಂಭದ ಪಂದ್ಯದಲ್ಲಿ ಓವರ್‌ಗಳ ಸಂಖ್ಯೆಯನ್ನು 12ಕ್ಕೆ ಇಳಿಸಲಾಯಿತು. ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌, ಹ್ಯಾರಿ ಟೆಕ್ಟರ್‌ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 108 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು 9.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್‌ ಪೇರಿಸಿತು.

ಐರ್ಲೆಂಡ್‌ ತಂಡ 22 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಕುಸಿತ ಅನುಭವಿಸಿತ್ತು. ಈ ಹಂತದಲ್ಲಿ ಜತೆಯಾದ ಟೆಕ್ಟರ್‌ ಮತ್ತು ಲಾರ್ಸನ್‌ ಟಕೆರ್‌ ತಂಡಕ್ಕೆ ಆಸರೆಯಾದರು. ಭಾರತದ ಬೌಲಿಂಗ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಟೆಕ್ಟರ್‌ 33 ಎಸೆತಗಳಲ್ಲಿ 64 ರನ್‌ ಗಳಿಸಿದರು. ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸಿದರು. ಟಕೆರ್‌ 16 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 18 ರನ್‌ ಗಳಿಸಿದರು.

ADVERTISEMENT

ಭಾರತದ ಆರಂಭಿಕ ಆಟಗಾರ ದೀಪಕ್‌ ಹೂಡಾ, 29 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 47 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಇಶಾನ್‌ ಕಿಶನ್‌ (11 ಎಸೆತಗಳಲ್ಲಿ 26 ರನ್‌) ಮತ್ತು ಹಾರ್ದಿಕ್‌ ಪಾಂಡ್ಯಾ (12 ಎಸೆತಗಳಲ್ಲಿ 24 ರನ್‌) ಗೆಲುವಿಗೆ ಸಹಕಾರಿಯಾದರು. ಮೂರನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್‌ ಯಾದವ್‌ ರನ್‌ ಖಾತೆ ತೆರೆಯದೆಯೇ ಹೊರ ನಡೆದರು.

ಐರ್ಲೆಂಡ್‌ ಪರ ಕ್ರೈಗ್‌ ಯಂಗ್‌ ಎರಡು ವಿಕೆಟ್‌ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಆವೇಶ್‌ ಖಾನ್‌ ಹಾಗೂ ಯಜುವೇಂದ್ರ ಚಾಹಲ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

ಭಾರತ ಮತ್ತು ಐರ್ಲೆಂಡ್‌ ಎರಡು ಪಂದ್ಯಗಳ ಟಿ20 ಸರಣಿ ಆಡುತ್ತಿವೆ.

ಸಂಕ್ಷಿಪ್ತ ಸ್ಕೋರ್‌:

ಐರ್ಲೆಂಡ್‌ 4ಕ್ಕೆ 108 ರನ್‌ (12 ಓವರ್‌), ಹ್ಯಾರಿ ಟೆಕ್ಟರ್‌–64 ರನ್‌
ಭಾರತ 3ಕ್ಕೆ 111 ರನ್‌ (9.2 ಓವರ್‌), ದೀಪಕ್‌ ಹೂಡಾ–47 ರನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.