ಇಂಡಿಯಾ ಚಾಂಪಿಯನ್ಸ್
(ಚಿತ್ರ ಕೃಪೆ: X/@WclLeague)
ಬರ್ಮಿಂಗ್‌ಹ್ಯಾಮ್: ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್ (ಡಬ್ಲ್ಯುಸಿಎಲ್) ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಆಡಲು ಇಂಡಿಯಾ ಚಾಂಪಿಯನ್ಸ್ ಆಟಗಾರರು ನಿರಾಕರಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಅನಿಶ್ಚಿತತೆ ಮುಂದುವರಿದಿದೆ.
ಡಬ್ಲ್ಯುಸಿಎಲ್ ಟೂರ್ನಿಯ ಲೀಗ್ ಹಂತದಲ್ಲೂ ಪಾಕಿಸ್ತಾನ ವಿರುದ್ದ ಆಡಲು ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ನಿರಾಕರಿಸಿದ್ದರಿಂದ ಪಂದ್ಯ ರದ್ದುಗೊಂಡಿತ್ತು.
ಈಗ ಭಾರತೀಯರ ಭಾವನೆಗಳಿಗೆ ಸ್ಪಂದಿಸಿ ಸೆಮಿಫೈನಲ್‌ನಲ್ಲೂ ಆಡಲು ಆಟಗಾರರು ಹಿಂದೇಟು ಹಾಕಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿತ್ತಲ್ಲದೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.
ಎಜ್‌ಬಾಸ್ಟನ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯ ಗುರುವಾರ ನಿಗದಿಯಾಗಿತ್ತು. ಪಾಕಿಸ್ತಾನ ವಿರುದ್ಧ ಆಡುವುದಿಲ್ಲವೆಂದು ಶಿಖರ್ ಧವನ್, ಇರ್ಫಾನ್ ಪಠಾಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಭಾರತೀಯ ಆಟಗಾರರು ಈಗಾಗಲೇ ಪ್ರಕಟಿಸಿದ್ದಾರೆ.
ಏತನ್ಮಧ್ಯೆ ಟೂರ್ನಿಗೆ ಮುಖ್ಯ ಪ್ರಾಯೋಜಕರಾದ 'ಈಸ್‌ಮೈಟ್ರಿಪ್' ಕೂಡ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಪ್ರಾಯೋಜಕತ್ವವನ್ನು ವಹಿಸುವುದಿಲ್ಲ ಎಂದು ಹೇಳಿದೆ.
ಈ ಕುರಿತು ಈಸ್‌ಮೈಟ್ರಿಪ್‌ನ ಸಹ ಸ್ಥಾಪಕರಾದ ನಿಶಾಂತ್ ಪಿಟ್ಟಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಕ್ರಿಕೆಟ್ ಹಾಗೂ ಭಯೋತ್ಪಾದನೆ ಒಂದಾಗಿ ಸಾಗಲು ಸಾಧ್ಯವಿಲ್ಲ. ನಾವು ಭಾರತೀಯರೊಂದಿಗೆ ನಿಲ್ಲುತ್ತೇವೆ. ಕೆಲವು ವಿಷಯಗಳು ಕ್ರೀಡೆಗಿಂತಲೂ ಮಿಗಿಲಾಗಿವೆ. ವ್ಯಾಪಾರಕ್ಕಿಂತ ದೇಶ ಮೊದಲು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.