ಸೂರ್ಯಕುಮಾರ್ ಯಾದವ್
ದುಬೈ: ‘ಸಪ್ಪೆ’ ಎನ್ನುವ ಪದ ಸಾಮಾನ್ಯವಾಗಿ ಪ್ರಬಲ ಭಾರತ ಟಿ20 ತಂಡದ ಜೊತೆ ಹೊಂದುವುದಿಲ್ಲ. ಆದರೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಆರಂಭದಿಂದ ಭಾರತ ಸಪ್ಪೆ ಎನಿಸಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧ ಕ್ರಮವಾಗಿ ಆರು ವಿಕೆಟ್ ಮತ್ತು 41 ರನ್‌ಗಳಿಂದ ಭಾರತ ಅರ್ಹ ರೀತಿಯಲ್ಲಿ ಜಯಗಳಿಸಿದೆ. ಆದರೆ ಮೂರೂ ವಿಭಾಗಗಳಲ್ಲಿ ತನ್ನ ಆಟದ ಉತ್ತುಂಗದಲ್ಲಿ ಇರಲಿಲ್ಲ ಎನ್ನುವುದನ್ನು ಮುಚ್ಚಿಡುವಂತಿಲ್ಲ. ಹಾಲಿ ಟೂರ್ನಿಯಲ್ಲಿ ಸತತ 5 ಪಂದ್ಯ ಗೆದ್ದಿರುವ ತಂಡಕ್ಕೆ ಸುಧಾರಣೆಗೆ ಸಾಕಷ್ಟು ಅವಕಾಶವಿದೆ ಎನ್ನುವುದು ಕಟುವಾಸ್ತವ.
ಪಾಕಿಸ್ತಾನ ವಿರುದ್ಧ ಮೊದಲ 10 ಓವರುಗಳಲ್ಲಿ ತಂಡದ ಬೌಲಿಂಗ್ ಪರಿಣಾಮಕಾರಿ ಆಗಿರಲಿಲ್ಲ. ಬಾಂಗ್ಲಾ ದೇಶ ತಂಡದ ವಿರುದ್ಧ ಕೊನೆಯ 10 ಓವರುಗಳಲ್ಲಿ ಬ್ಯಾಟಿಂಗ್ ಕಳಾಹೀನವಾ ಗಿತ್ತು. ಕ್ಷೇತ್ರರಕ್ಷಣೆಯಲ್ಲಂತೂ ತಂಡ ಕಳಪೆ ಎನಿಸಿದ್ದು, ಎರಡು ಪಂದ್ಯಗಳಲ್ಲಿ (39.3 ಓವರ್) 9 ಕ್ಯಾಚುಗಳನ್ನು ಕೈಬಿಟ್ಟಿದೆ.
ಶುಕ್ರವಾರ ತಂಡವು, ಶ್ರೀಲಂಕಾ ವಿರುದ್ಧ ಸೂಪರ್ ಲೀಗ್ ಹಂತದ ಅಂತಿಮ ಪಂದ್ಯ ಆಡಲಿದ್ದು, 48 ಗಂಟೆಗಳ ನಂತರ ನಡೆಯುವ ಫೈನಲ್‌ಗೆ ಮುನ್ನ ಈ ನ್ಯೂನತೆಗಳನ್ನು ತಿದ್ದಲು ಕೊನೆಯ ಅವಕಾಶವಾಗಿದೆ.
ಜಸ್‌ಪ್ರೀತ್ ಬೂಮ್ರಾ ಕೊನೆಗೂ ಲಯಕಂಡುಕೊಂಡಿದ್ದು, ಮೊದಲ ಬಾರಿ ಬುಧವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪರಿಣಾಮಕಾರಿ ಎನಿಸಿದ್ದರು. ವರುಣ್ ಚಕ್ರವರ್ತಿ ಸಹ ಲಯಕ್ಕೆ ಮರಳಿರುವುದು ತಂಡಕ್ಕೆ ಸಮಾಧಾನದ ಅಂಶ. ಕುಲದೀಪ್ ಮಾತ್ರ ಇದುವರೆಗೆ ಯಶಸ್ವಿ ಬೌಲರ್ ಆಗಿ (12 ವಿಕೆಟ್) ಗುರುತಿಸಿಕೊಂಡಿದ್ದಾರೆ.
ಅಭಿಷೇಕ್ ಶರ್ಮಾ ಮತ್ತು ಸ್ವಲ್ಪ ಮಟ್ಟಿಗೆ ಶುಭಮನ್ ಗಿಲ್ ಮಾತ್ರ ಯಶಸ್ವಿ ಎನಿಸಿದ್ದಾರೆ. ಟೂರ್ನಿಯಲ್ಲಿ ಅವರಿಬ್ಬರಷ್ಟೇ ಇದುವರೆಗೆ ನೂರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಭಿಷೇಕ್ 17 ಸಿಕ್ಸರ್ ಸಿಡಿಸಿದ್ದಾರೆ. ತಂಡದ ಉಳಿದವರು ಒಟ್ಟುಸೇರಿ ಬಾರಿಸಿದ್ದು 16 ಸಿಕ್ಸರ್ ಮಾತ್ರ. ನಾಯಕ ಸೂರ್ಯಕುಮಾರ್ ಯಾದವ್ ಪರದಾಡಿದ್ದಾರೆ. ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಅಜೇಯ 47 ರನ್ ಬಿಟ್ಟರೆ ಉಳಿದಂತೆ ಅವರ ಕೊಡುಗೆ ನಗಣ್ಯ.
ಲಂಕಾ ಆಟಗಾರರೂ ಸೂಪರ್ ಫೋರ್ ಹಂತದಲ್ಲಿ ರನ್‌ಗಳಿಗೆ ಪರದಾಡಿದ್ದಾರೆ. ಎರಡು ಪಂದ್ಯ ಸೋತಿರುವ ಲಂಕಾಕ್ಕೆ ಕಳೆದುಕೊಳ್ಳುವುದು ಏನೂ ಇಲ್ಲದ ಕಾರಣ ನಿರ್ಗಮಿಸುವ ಮುನ್ನ ಆಟದ ಮಟ್ಟ ಎತ್ತರಿಸುವುದೇ ಎಂಬುದನ್ನು ಕಾದುನೋಡಬೇಕು.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.