ADVERTISEMENT

ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಜಯ: ಇಂಗ್ಲೆಂಡ್ ಹಿಂದಿಕ್ಕಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2025, 10:42 IST
Last Updated 15 ಅಕ್ಟೋಬರ್ 2025, 10:42 IST
<div class="paragraphs"><p>ಟ್ರೋಫಿಯೊಂದಿಗೆ ಟೀಂ ಇಂಡಿಯಾ </p></div>

ಟ್ರೋಫಿಯೊಂದಿಗೆ ಟೀಂ ಇಂಡಿಯಾ

   

ಕೃಪೆ: ಪಿಟಿಐ

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲೂ ಜಯ ಸಾಧಿಸಿರುವ ಟೀಂ ಇಂಡಿಯಾ, ಅಂತರ ರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಹೆಚ್ಚು ಗೆಲುವುಗಳನ್ನು ಕಂಡ ತಂಡಗಳ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದೆ.

ADVERTISEMENT

ನವದೆಹಲಿಯಲ್ಲಿ ಶುಕ್ರವಾರ (ಅ.10ರಂದು) ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್‌, ಪ್ರಥಮ ಇನಿಂಗ್ಸ್‌ನಲ್ಲಿ 248 ರನ್‌ ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ 5 ವಿಕೆಟ್‌ಗೆ 518 ರನ್‌ ಗಳಿಸಿದ ಶುಭಮನ್‌ ಗಿಲ್‌ ಬಳಗ, ಪ್ರವಾಸಿ ಪಡೆಯ ಮೇಲೆ ಫಾಲೋಆನ್‌ ಹೇರಿತು. ಆದರೆ, ಸೋಲು ತಪ್ಪಿಸಿಕೊಳ್ಳಲು ಎರಡನೇ ಇನಿಂಗ್ಸ್‌ನಲ್ಲಿ ಹೋರಾಟ ನಡೆಸಿತು. ಆದಾಗ್ಯೂ 390 ರನ್‌ ಗಳಿಸಿ ಆಲೌಟ್ ಆಗುವ ಮೂಲಕ ಪಂದ್ಯವನ್ನು ಐದನೇ ದಿನದವರೆಗೂ ವಿಸ್ತರಿಸಿತು.

124 ರನ್‌ಗಳ ಅಲ್ಪ ಗುರಿಯನ್ನು ಭಾರತ 3 ವಿಕೆಟ್‌ ಕಳೆದುಕೊಂಡು ತಲುಪಿತು. ಇದರೊಂದಿಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 922ನೇ ಜಯ ದಾಖಲಿಸಿತು.

ಅಗ್ರ ಸ್ಥಾನದಲ್ಲಿ ಆಸ್ಟ್ರೇಲಿಯಾ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದೆ. ಟೆಸ್ಟ್‌, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಒಟ್ಟು 2,107 ಪಂದ್ಯಗಳಲ್ಲಿ ಆಡಿರುವ ಈ ತಂಡ 1,158 ಜಯ ಮತ್ತು 676 ಸೋಲು ಕಂಡಿದೆ. 14 ಟೈ, 219 ಡ್ರಾ ಸಾಧಿಸಿದ್ದು, ಫಲಿತಾಂಶ ಕಾಣದ 40 ಪಂದ್ಯಗಳಿಗೂ ಸಾಕ್ಷಿಯಾಗಿದೆ.

ಎರಡನೇ ಸ್ಥಾನದಲ್ಲಿರುವ ಭಾರತ 1,916 ಪಂದ್ಯಗಳಿಂದ 922 ಜಯ ಸಾಧಿಸಿದ್ದು, 702 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 18 ಟೈ, 224 ಡ್ರಾ ಮಾಡಿಕೊಂಡಿದೆ. 50 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

2,117 ಪಂದ್ಯಗಳಲ್ಲಿ ಆಡಿ 921 ಗೆದ್ದಿರುವ ಇಂಗ್ಲೆಂಡ್‌, 790ರಲ್ಲಿ ಸೋಲುಂಡಿದೆ. 11 ಟೈ, 356 ಡ್ರಾ ಹಾಗೂ 39 ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾಗಿವೆ.

ಪಾಕಿಸ್ತಾನ (1,734 ಪಂದ್ಯ, 831 ಜಯ), ದಕ್ಷಿಣ ಆಫ್ರಿಕಾ (1,374 ಪಂದ್ಯ, 719 ಜಯ), ವೆಸ್ಟ್‌ ಇಂಡೀಸ್‌ (1,711 ಪಂದ್ಯ, 710 ಜಯ), ಶ್ರೀಲಂಕಾ (1,479 ಪಂದ್ಯ, 637 ಜಯ), ನ್ಯೂಜಿಲೆಂಡ್‌ (1,559 ಪಂದ್ಯ, 634 ಜಯ) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.