ADVERTISEMENT

IND vs NZ | ಕೊಹ್ಲಿ–ಬೂಮ್ರಾ ವಿಫಲ: 1989ರ ಬಳಿಕ ಮೊದಲ ಸಲ ವೈಟ್ ವಾಷ್ ಆದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2020, 12:53 IST
Last Updated 11 ಫೆಬ್ರುವರಿ 2020, 12:53 IST
ವಿರಾಟ್‌ ಕೊಹ್ಲಿ ಹಾಗೂ ಜಸ್‌ಪ್ರೀತ್‌ ಬೂಮ್ರಾ
ವಿರಾಟ್‌ ಕೊಹ್ಲಿ ಹಾಗೂ ಜಸ್‌ಪ್ರೀತ್‌ ಬೂಮ್ರಾ   

ಮೌಂಟ್ ಮಾಂಗನೂಯಿ: ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲು ಕಂಡ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ, 1989ರ ಬಳಿಕ ಮೊದಲ ಸಲವೈಟ್‌ವಾಷ್‌ ಆಯಿತು.

1988–89ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಎಲ್ಲ ಪಂದ್ಯಗಳನ್ನು ಸೋತಿದ್ದ ಭಾರತ, ಆ ಬಳಿಕಆಡಿದ ಮೂರು ಮತ್ತು ಅದಕ್ಕಿಂತ ಹೆಚ್ಚು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಒಮ್ಮೆಯೂವೈಟ್‌ವಾಷ್‌ ಆಗಿರಲಿಲ್ಲ.

ಕೊಹ್ಲಿ–ಬೂಮ್ರಾ ವೈಫಲ್ಯ
ಭಾರತ ಕ್ರಿಕೆಟ್‌ ತಂಡದ ರನ್‌ ಯಂತ್ರ ಹಾಗೂ ನಾಯಕ ವಿರಾಟ್‌ ಕೊಹ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳಿಂದ ಗಳಿಸಿದ್ದು ಕೇವಲ 75 ರನ್‌. ಮೊದಲ ಪಂದ್ಯದಲ್ಲಿ ಅರ್ಧಶತಕ (51) ಗಳಿಸಿದ್ದು ಬಿಟ್ಟರೆ, ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ 15 ಮತ್ತು 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ADVERTISEMENT

ಸರಣಿಯಲ್ಲಿ ಬರೋಬ್ಬರಿ 30 ಓವರ್‌ ಎಸೆದಪ್ರಮುಖ ವೇಗಿ ಜಸ್‌ಪ್ರಿತ್‌ ಬೂಮ್ರಾಗೆ ಒಂದೇಒಂದು ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಈ ಇಬ್ಬರೂ ಐಸಿಸಿ ಏಕದಿನ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ರಮಾಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂಬುದು ವಿಶೇಷ.

ಇಂದು ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 296 ರನ್ ಗಳಿಸಿತ್ತು. ಈ ಗುರಿಯನ್ನು ಕೀವಿಸ್‌ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿತು. ಆರಂಭಿಕ ಮಾರ್ಟಿನ್‌ ಗಪ್ಟಿಲ್‌ (66), ಹೆನ್ರಿ ನಿಕೋಲಸ್‌ (80) ಹಾಗೂ ಕಾಲಿನ್‌ ಡಿ ಗ್ರಾಂಡ್‌ ಹೋಮ್‌ (58) ತಮ್ಮ ತಂಡಕ್ಕೆ 5 ವಿಕೆಟ್‌ ಗೆಲುವು ತಂದುಕೊಟ್ಟರು.

ಮೊದಲ ಪಂದ್ಯದಲ್ಲಿ 348 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನಟ್ಟಿ ಗೆದ್ದಿದ್ದ ಕಿವೀಸ್‌, ಎರಡನೇ ಪಂದ್ಯದಲ್ಲಿ 22 ರನ್‌ ಅಂತರದ ಜಯ ಸಾಧಿಸಿತ್ತು.

ರನ್ ಹರಿಸದ ಮಯಂಕ್‌
ಆರಂಭಿಕ ಬ್ಯಾಟ್ಸ್‌ಮನ್‌ ಉಪನಾಯಕ ರೋಹಿತ್‌ ಶರ್ಮಾ ಗಾಯಗೊಂಡು ತಂಡದಿಂದ ಹೊರಬಿದ್ದಿರುವುದರಿಂದ, ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಕನ್ನಡಿಗ ಮಯಂಕ್‌ ಅಗರವಾಲ್‌ ರನ್ ಹರಿಸುವಲ್ಲಿ ವಿಫಲರಾದರು.

ಮೊದಲ ಪಂದ್ಯದಲ್ಲಿ 32 ರನ್‌ ಗಳಿಸಿದ್ದೇ ಅವರ ಗರಿಷ್ಠ ರನ್‌. ಉಳಿದೆರಡು ಪಂದ್ಯಗಳಲ್ಲಿ ಕ್ರಮವಾಗಿ 3 ಮತ್ತು 1 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಮಯಂಕ್‌ ಜೊತೆಗೆ ಪದಾರ್ಪಣೆ ಮಾಡಿದ ಆರಂಭಿಕ ಪೃಥ್ವಿ ಶಾ ಮೂರು ಪಂದ್ಯಗಳಿಂದ 84 ರನ್‌ ಗಳಿಸಿದರು.

ಅವಕಾಶ ಬಳಸಿಕೊಂಡ ಪಾಂಡೆ
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಕೇದಾರ್‌ ಜಾಧವ್‌ ಬದಲು ಸ್ಥಾನ ಪಡೆದ ಮನೀಷ್‌ ಪಾಂಡೆ ನಿರೀಕ್ಷೆ ಹುಸಿ ಮಾಡಲಿಲ್ಲ. ಮೂರನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್‌ ಜೊತೆ ಸೇರಿ ಐದನೇ ವಿಕೆಟ್‌ ಜೊತೆಯಾಟದಲ್ಲಿ ಶತಕದ (107) ಜೊತೆಯಾಟವಾಡಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.

48 ಎಸೆತಗಳನ್ನು ಎದುರಿಸಿದ ಅವರು 42 ರನ್‌ ಗಳಿಸಿ ಗಮನ ಸೆಳೆದರು.

ದುಬಾರಿಯಾದ ಠಾಕೂರ್‌
ಭರವಸೆಯ ಬೌಲರ್‌ ಎನಿಸಿದ್ದ ಶಾರ್ದೂಲ್‌ ಠಾಕೂರ್‌ ಸರಣಿಯುದ್ದಕ್ಕೂ ದುಬಾರಿಯಾದರು. ಮೊದಲ ಪಂದ್ಯದಲ್ಲಿ ಕೇವಲ 9 ಓವರ್‌ಗಳಲ್ಲಿ 80 ರನ್‌ ಬಿಟ್ಟುಕೊಟ್ಟಿದ್ದರು. ಎರಡನೇ ಪಂದ್ಯದಲ್ಲಿ 10 ಓವರ್‌ಗಳಲ್ಲಿ 60 ರನ್‌ ನೀಡಿದರು. ಮೂರನೇ ಪಂದ್ಯದಲ್ಲಿ 9.49ರ ಸರಾಸರಿಯಲ್ಲಿ (9.1 ಓವರ್‌ಗಳಲ್ಲಿ) 87 ರನ್‌ ಚಚ್ಚಿಸಿಕೊಂಡರು.

ಮೊದಲೆರಡು ಪಂದ್ಯಗಳಲ್ಲಿ ತಲಾ ಎರಡು ಮತ್ತು ಕೊನೆ ಪಂದ್ಯದಲ್ಲಿ 1 ವಿಕೆಟ್‌ ಪಡೆದದ್ದಷ್ಟೇ ಸಾಧನೆ.

ಅಯ್ಯರ್‌–ರಾಹುಲ್ ಉತ್ತಮ ಆಟ
ಬಹುದಿನಗಳಿಂದ ತಲೆನೋವಾಗಿದ್ದ ನಾಲ್ಕನೇ ಕ್ರಮಾಂಕದ ಪ್ರಶ್ನೆಗೆ ಶ್ರೇಯಸ್‌ ಅಯ್ಯರ್‌ ಉತ್ತರವಾದರು. ಐದನೇ ಕ್ರಮಾಂಕದಲ್ಲಿ ಕೆ.ಎಲ್‌.ರಾಹುಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದರು. ಮೂರು ಪಂದ್ಯಗಳಿಂದ ಅಯ್ಯರ್‌ 217 (ಕ್ರಮವಾಗಿ 103, 52 ಮತ್ತು 62 ರನ್‌) ಹಾಗೂ ರಾಹುಲ್‌204 ರನ್‌ (ಕ್ರಮವಾಗಿ 88, 04 ಮತ್ತು 112 ರನ್‌) ಗಳಿಸಿದರು.

ಇವರಿಬ್ಬರೂ ತಂಡದ ಮಧ್ಯಮ ಕ್ರಮಾಂಕ್ಕೆ ಬಲ ತುಂಬಿದರು.ಆದರೆ,ಬೌಲರ್‌ಗಳು ಮೊತ್ತ ರಕ್ಷಿಸಿಕೊಳ್ಳಲು ವಿಫಲವಾದದ್ದು ಮುಳುವಾಯಿತು.

ಜಯ ಕಸಿದ ಹೆನ್ರಿ–ರಾಸ್‌
ಕಿವೀಸ್‌ಸರಣಿಯ ಮೂರೂ ಪಂದ್ಯಗಳಲ್ಲಿ ಮಿಂಚಿದ ಹೆನ್ರಿ ನಿಕೋಲಸ್‌ಮತ್ತು ಮೊದಲೆರಡು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದರಾಸ್ ಟೇಲರ್‌ ಭಾರತಕ್ಕೆ ಕಂಟಕವಾದರು.

ಬೃಹತ್‌ ಮೊತ್ತ ಬೆನ್ನತ್ತಿದ್ದ ಪಂದ್ಯದಲ್ಲಿ 78 ರನ್‌ ಗಳಿಸಿದ್ದ ಹೆನ್ರಿ ಎರಡನೇ ಪಂದ್ಯದಲ್ಲಿ 41 ಮತ್ತು ಮೂರನೇ ಪಂದ್ಯದಲ್ಲಿ 80 ರನ್‌ ಗಳಿಸಿದ್ದರು. ಮೊದಲ ಪಂದ್ಯದಲ್ಲಿ ಶತಕ (109) ಸಿಡಿಸಿದ್ದ ರಾಸ್ ಟೇಲರ್‌, ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಕಿವೀಸ್‌ಗೆ ಎರಡನೇ ಪಂದ್ಯದಲ್ಲೂ (73) ಆಸರೆಯಾಗಿದ್ದರು.

ಈ ಸರಣಿಯಲ್ಲಿ ಹೆನ್ರಿ 199 ರನ್‌ ಗಳಿಸಿದರೆ, ಟೇಲರ್‌194 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.