ADVERTISEMENT

ಅಂಧ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಭಾರತ ಆತಿಥ್ಯ

ಪಿಟಿಐ
Published 3 ಡಿಸೆಂಬರ್ 2024, 13:50 IST
Last Updated 3 ಡಿಸೆಂಬರ್ 2024, 13:50 IST
*
*   

ನವದೆಹಲಿ: ಅಂಧ ಮಹಿಳೆಯರ ಪ್ರಥಮ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತವು ಆತಿಥ್ಯ ವಹಿಸಲಿದೆ. ಮುಂದಿನ ವರ್ಷ ನಡೆಯಲಿರುವ ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಹೈಬ್ರಿಡ್ ಮಾದರಿಯಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ವಿಶ್ವ ಅಂಧ ಕ್ರಿಕೆಟ್ ಕೌನ್ಸಿಲ್ (ಡಬ್ಲ್ಯುಬಿಸಿಸಿ) ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. 

ಶ್ರೀಲಂಕಾ ಅಥವಾ ನೇಪಾಳದಲ್ಲಿ ಪಾಕ್ ತಂಡದ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧ ಪುರುಷರ ಕ್ರಿಕಟೆ ವಿಶ್ವಕಪ್ ಟೂರ್ನಿಯಿಂದ ಭಾರತ ತಂಡವು ಈಚೆಗೆ ಹಿಂದೆ ಸರಿದಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಪಾಕ್ ಮಹಿಳಾ ತಂಡವನ್ನು ಭಾರತಕ್ಕೆ ಕಳುಹಿಸದಿರುವ ನಿರ್ಧಾರವನ್ನು ಆ ದೇಶದ ಮಂಡಳಿಯು ತೆಗೆದುಕೊಂಡಿದೆ. 

ಸೋಮವಾರ ನಡೆದ ಈ ಸಭೆಯಲ್ಲಿ ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪ್ರತಿನಿಧಿಗಳು ವರ್ಚುವಲ್ ಆಗಿ ಹಾಜರಿದ್ದರು. 

ADVERTISEMENT

‘ಭಾರತಕ್ಕೆ ಈ ಟೂರ್ನಿಯ ಆತಿಥ್ಯ ವಹಿಸಲು ಹೋದ ವರ್ಷವೇ ಅನುಮತಿ ನೀಡಲಾಗಿದೆ. ಪಾಕ್ ಆಟಗಾರರಿಗೆ ಭಾರತಕ್ಕೆ ತೆರಳಲು ವೀಸಾ ತೊಂದರೆ ಆಗಬಹುದು. ಆದ್ದರಿಂದ ಹೈಬ್ರಿಡ್ ಮಾಡೆಲ್ ಕುರಿತು ಆಗಲೇ ನಿರ್ಧರಿಸಲಾಗಿತ್ತು. ಪಾಕಿಸ್ತಾನ ತಂಡವು ತನ್ನ ಎಲ್ಲ ಪಂದ್ಯಗಳನ್ನೂ ತಟಸ್ಥ ತಾಣದಲ್ಲಿ ಆಡುವುದು’ ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಅಧ್ಯಕ್ಷ ಜಿ.ಕೆ. ಮಹಾಂತೇಶ್ ಹೇಳಿದ್ದಾರೆ.

‘ಪಾಕ್ ತಂಡವು ನೇಪಾಳ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಡಬಹುದು. ಅವರ ವಿರುದ್ಧದ ಪಂದ್ಯದಲ್ಲಿ ಆಡಲು ಭಾರತ ತಂಡವೂ ನೇಪಾಳ ಅಥವಾ ಲಂಕಾಗೆ ತೆರಳುವುದು’ ಎಂದೂ ಅವರು ತಿಳಿಸಿದ್ದಾರೆ.  

ಈ ಸಭೆಯಲ್ಲಿ ಭಾರತದ ರಜನೀಶ್ ಹೆನ್ರಿ ಮತ್ತು ಕೆ.ಎನ್. ಚಂದ್ರಶೇಖರ್ ಅವರನ್ನು ಡಬ್ಲ್ಯುಬಿಸಿಸಿಗೆ ಕ್ರಮವಾಗಿ ಮಹಾಪ್ರಧಾನ ಕಾರ್ಯದರ್ಶಿ ಮತ್ತು ಹಣಕಾಸು ನಿರ್ದೇಶಕರಾಗಿ ನೇಮಕ ಮಾಡುವ ಕುರಿತು ಚರ್ಚೆ  ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.