ADVERTISEMENT

4ನೇ ಕ್ರಮಾಂಕದಲ್ಲಿ ವಿರಾಟ್ ವಿಫಲ: ಆಸಿಸ್‌ಗೆ 256 ರನ್ ಗುರಿ ನೀಡಿದ ಭಾರತ

ಮೂರು ಪಂದ್ಯಗಳ ಏಕದಿನ ಸರಣಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 12:00 IST
Last Updated 14 ಜನವರಿ 2020, 12:00 IST
   

ಮುಂಬೈ: ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡ ಆಸ್ಟ್ರೇಲಿಯಾದ ಶಿಸ್ತುಬದ್ದ ಬೌಲಿಂಗ್ ದಾಳಿ ಎದುರು ಸಮರ್ಥ ಆಟವಾಡಲು ವಿಫಲವಾಯಿತು. 49.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡ ವಿರಾಟ್‌ ಕೊಹ್ಲಿ ಬಳಗ ಪ್ರವಾಸಿ ಪಡೆಗೆ 256 ರನ್‌ಗಳಗುರಿ ನೀಡಿದೆ.

ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಲ್ಲ. ತಂಡದ ಮೊತ್ತ 13 ರನ್‌ ಆಗಿದ್ದಾಗ ರೋಹಿತ್‌ ಶರ್ಮಾ (10) ವಿಕೆಟ್‌ ಒಪ್ಪಿಸಿದರು. ಆದರೆ ಬಳಿಕಜೊತೆಯಾದ ಶಿಖರ್‌ ಧವನ್‌ ಹಾಗೂ ಕನ್ನಡಿಗ ಕೆ.ಎಲ್‌.ರಾಹುಲ್‌ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 136 ಎಸೆತಗಳಲ್ಲಿ 121 ರನ್‌ ಕೂಡಿಸಿದರು. ಧವನ್‌ 91 ಎಸೆತಗಳಲ್ಲಿ 74 ರನ್ ಗಳಿಸಿ ಔಟಾದರೆ, ರಾಹುಲ್‌ 61 ಎಸೆತಗಳಲ್ಲಿ 47 ರನ್‌ ಕಲೆಹಾಕಿ ವಿಕೆಟ್‌ ಒಪ್ಪಿಸಿದರು.

ರಾಹುಲ್‌ಗೆ ಮೂರನೇ ಕ್ರಮಾಂಕ ಬಿಟ್ಟುಕೊಟ್ಟು ನಾಲ್ಕನೇ ಸ್ಥಾನದಲ್ಲಿ ಆಡಲಿಳಿದ ನಾಯಕ ವಿರಾಟ್‌ ಕೇವಲ 16 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಕೇವಲ ನಾಲ್ಕು ರನ್ ಗಳಿಸಿದ ಶ್ರೇಯಸ್‌ ಅಯ್ಯರ್‌ ನಾಯಕನನ್ನು ಹಿಂಬಾಲಿಸಿದರು.

ADVERTISEMENT

164 ರನ್‌ ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್‌ ಕಳೆದುಕೊಂಡಿದ್ದ ತಂಡದ ಮೊತ್ತವನ್ನು ರವೀಂದ್ರ ಜಡೇಜಾ (25) ಮತ್ತು ರಿಷಭ್‌ ಪಂತ್‌(28) 200ರ ಗಡಿ ದಾಟಿಸಿದರು. ಕೊನೆಯಲ್ಲಿ ಬೌಲರ್‌ಗಳು ಅಲ್ಪ ಕಾಣಿಕೆ ನೀಡಿದ್ದರಿಂದ ಮೊತ್ತ 255ಕ್ಕೇರಿತು.

ಆಸ್ಟ್ರೇಲಿಯಾ ಪರ ವೇಗಿ ಮಿಚೇಲ್‌ ಸ್ಟಾರ್ಕ್‌ ಮೂರು ವಿಕೆಟ್ ಕಬಳಿಸಿದರೆ, ಐಪಿಎಲ್‌ನಲ್ಲಿ ಅತಿಹೆಚ್ಚು ಮೊತ್ತಕ್ಕೆ ಹರಾಜಾಗಿರುವ ವಿದೇಶಿ ಆಟಗಾರ ಎನಿಸಿರುವ ಪ್ಯಾಟ್‌ ಕಮಿನ್ಸ್‌ ಹಾಗೂಕೇನ್‌ ರಿಚರ್ಡ್‌ಸನ್‌ ಎರಡೆರಡುವಿಕೆಟ್‌ ಹಂಚಿಕೊಂಡರು. ಉಳಿದಂತೆಆ್ಯಡಂ ಜಂಪಾ, ಆಸ್ಟನ್‌ ಅಗರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಉಭಯ ತಂಡಗಳ ‘ಆಡುವ ಹನ್ನೊಂದರ ಬಳಗ’:
ಭಾರತ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್ ಅಯ್ಯರ್‌, ರಿಷಭ್ ಪಂತ್‌ (ವಿಕೆಟ್ ಕೀಪರ್‌), ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್‌, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯಾ:ಆ್ಯರನ್ ಫಿಂಚ್‌ (ನಾಯಕ), ಡೇವಿಡ್ ವಾರ್ನರ್‌, ಮಾರ್ನಸ್‌ ಲಾಬುಶೇನ್‌, ಸ್ಟೀವ್ ಸ್ಮಿತ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಆ್ಯಷ್ಟನ್ ಅಗರ್‌, ಕೇನ್‌ ರಿಚರ್ಡ್ಸನ್‌, ಮಿಷೆಲ್ ಸ್ಟಾರ್ಕ್‌, ಆ್ಯಷ್ಟನ್ ಟರ್ನರ್‌, ಆ್ಯಡಂ ಜಂಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.