ನಿತೀಶ್ ರೆಡ್ಡಿ
ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ (0) ಅವರನ್ನು ಮಿಚೆಲ್ ಸ್ಟಾರ್ಕ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಜೈಸ್ವಾಲ್, ಗೋಲ್ಡನ್ ಡಕ್ ಆದರು.
ಕೆ.ಎಲ್.ರಾಹುಲ್ ಹಾಗೂ ಶುಭಮನ್ ಗಿಲ್ ದ್ವಿತೀಯ ವಿಕೆಟ್‌ಗೆ 69 ರನ್‌ಗಳ ಜೊತೆಯಾಟ ಕಟ್ಟಿದರು. ಆದರೆ ರಾಹುಲ್ ವಿಕೆಟ್ ಪತನದೊಂದಿಗೆ ಭಾರತ ಮಗದೊಮ್ಮೆ ದಿಢೀರ್ ಪತನವನ್ನು ಕಂಡಿತು. ವಿರಾಟ್ ಕೊಹ್ಲಿ 7, ರೋಹಿತ್ ಶರ್ಮಾ 3 ರನ್ ಗಳಿಸಿ ಔಟ್ ಆದರು.
ರಿಷಭ್ ಪಂತ್ 21, ನಿತೀಶ್ ರೆಡ್ಡಿ 42 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಆಸೀಸ್ ಪರ ಪ್ರಭಾವಿ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಗಳಿಸಿದರು.
ಭಾರತ ತಂಡದಲ್ಲಿ ಮೂರು ಬದಲಾವಣೆ...
ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಪಿತೃತ್ವದ ರಜೆಯಲ್ಲಿದ್ದ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಅದೇ ರೀತಿ ಗಾಯಮುಕ್ತಗೊಂಡಿರುವ ಶುಭಮನ್ ಗಿಲ್ ಹಾಗೂ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇವರಿಗಾಗಿ ದೇವದತ್ತ ಪಡಿಕ್ಕಲ್, ಧ್ರುವ್ ಜುರೇಲ್ ಹಾಗೂ ವಾಷಿಂಗ್ಟನ್ ಸುಂದರ್ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.