ADVERTISEMENT

ಮಹಿಳಾ ಟೆಸ್ಟ್ ಕ್ರಿಕೆಟ್: ಸಾಧಾರಣ ಮೊತ್ತಕ್ಕೆ ಕುಸಿದ ಆಸಿಸ್, ಭಾರತ ಬಿರುಸಿನ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2023, 11:05 IST
Last Updated 21 ಡಿಸೆಂಬರ್ 2023, 11:05 IST
<div class="paragraphs"><p>ವಿಕೆಟ್‌ ಪಡೆದ&nbsp;ಸಂಭ್ರಮದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿಯರು</p></div>

ವಿಕೆಟ್‌ ಪಡೆದ ಸಂಭ್ರಮದಲ್ಲಿ ಭಾರತ ಮಹಿಳಾ ತಂಡದ ಆಟಗಾರ್ತಿಯರು

   

ಪಿಟಿಐ ಚಿತ್ರ

ಮುಂಬೈ : ಮಧ್ಯಮವೇಗಿ ಪೂಜಾ ವಸ್ತ್ರಾಕರ್ ಮತ್ತು ಆಫ್‌ಸ್ಪಿನ್ನರ್ ಸ್ನೇಹಾ ರಾಣಾ ಅವರ ಪರಿಣಾಮಕಾರಿ ದಾಳಿಯ ಮುಂದೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಿತು.

ADVERTISEMENT

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಮಹಿಳೆಯರ ಏಕೈಕ ಟೆಸ್ಟ್‌ ಪಂದ್ಯದ ಮೊದಲ ದಿನ ಟಾಸ್ ಗೆದ್ದ ಪ್ರವಾಸಿ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪೂಜಾ (53ಕ್ಕೆ4) ಮತ್ತು ಸ್ನೇಹಾ (56ಕ್ಕೆ3) ಅವರ ದಾಳಿಯ ಮುಂದೆ 77.4 ಓವರ್‌ಗಳಲ್ಲಿ 219 ರನ್ ಗಳಿಸಿದ ಆಸ್ಟ್ರೇಲಿಯಾ ಆಲೌಟ್ ಆಯಿತು. ಇದಕ್ಕುತ್ತರವಾಗಿ ಆತಿಥೇಯ ತಂಡವು ದಿನದಾಟದ ಮುಕ್ತಾಯಕ್ಕೆ 19 ಓವರ್‌ಗಳಲ್ಲಿ 1 ವಿಕೆಟ್‌ಗೆ 98 ರನ್ ಗಳಿಸಿತು.

ಶಫಾಲಿ ವರ್ಮಾ (40; 59ಎ, 4X8) ಮತ್ತು ಸ್ಮೃತಿ ಮಂದಾನ (ಬ್ಯಾಟಿಂಗ್ 43; 49ಎ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 90 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.  ದಿನದಾಟ ಮುಗಿಯಲು ಇನ್ನೂ ಎರಡು ಓವರ್‌ಗಳು ಬಾಕಿಯಿದ್ದಾಗ ಶಫಾಲಿ ಅವರನ್ನು ಬೌಲರ್ ಜೆಸ್ ಜಾನ್ಸನ್ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಪೂಜಾ, ಸ್ನೇಹಾ ಮಿಂಚು

ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಮೊದಲ ಓವರ್‌ನಲ್ಲಿಯೇ ಆಘಾತ ಎದುರಾಯಿತು. ಜಿಮಿಮಾ ರಾಡ್ರಿಗಸ್ ಮತ್ತು ವಿಕೆಟ್‌ಕೀಪರ್ ಯಷ್ಟಿಕಾ ಭಾಟಿಯಾ ಅವರ ಚುರುಕಾದ ಫೀಲ್ಡಿಂಗ್‌ನಿಂದಾಗಿ ಬ್ಯಾಟರ್ ಪೊಯೆಬಿ ಲಿಚ್‌ಫೀಲ್ಡ್‌ ರನ್‌ಔಟ್ ಆದರು. ಅವರು ಒಂದೂ ಎಸೆತ ಎದುರಿಸಲಿಲ್ಲ.

ಎರಡನೇ ಓವರ್‌ನಲ್ಲಿ ಒಂದು ಬೌಂಡರಿ ಗಳಿಸಿದ್ದ ಎಲಿಸಾ ಪೆರಿ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಪೂಜಾ ತಮ್ಮ ಖಾತೆ ಆರಂಭಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಅನಾಬೆಲ್ ಸದರ್ಲೆಂಡ್ (16ರನ್), ಆ್ಯಷ್ಲೆ ಗಾರ್ಡನರ್ ಮತ್ತು 40 ರನ್ ಗಳಿಸಿದ್ದ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರ ವಿಕೆಟ್‌ಗಳನ್ನೂ ಕಬಳಿಸಿದರು. ಇನ್ನೊಂದು ಬದಿಯಿಂದ ಸ್ನೇಹಾ ಕೂಡ ಪರಿಣಾಮಕಾರಿಯಾದರು. ಮೂವರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಮಿಂಚಿದ್ದ ಸ್ಪಿನ್ನರ್ ದೀಪ್ತಿ ಶರ್ಮಾ ನಾಯಕಿ ಅಲಿಸಾ ಹೀಲಿ (38 ರನ್) ದೊಡ್ಡ ಇನಿಂಗ್ಸ್‌ ಆಡದಂತೆ ತಡೆಯೊಡ್ಡಿದರು. ಜೆಸ್‌ ಜಾನ್ಸನ್ (19 ರನ್) ಅವರನ್ನೂ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇದೆಲ್ಲದರ ನಡುವೆ ಪ್ರವಾಸಿ ಬಳಗದ  ತಹಲಿಯಾ ಮೆಕ್‌ಗ್ರಾ (50; 56ಎ) ಅವರು ಅರ್ಧಶತಕ ಗಳಿಸಿದರು. ಇದರೊಂದಿಗೆ  ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು.  ಸ್ನೇಹ ರಾಣಾ ಮತ್ತು ರೇಣುಕಾ ಸಿಂಗ್ ಅವರು ತಲಾ ಒಂದು ಬಾರಿ ಮೆಕ್‌ಗ್ರಾ ಅವರ ಕ್ಯಾಚ್‌ ಕೈಚೆಲ್ಲಿದ್ದರು. ಬ್ಯಾಟರ್ ಕಿಮ್ ಗಾರ್ಥ್ ಅವರಿಗೂ ಒಂದು ಜೀವದಾನ ಲಭಿಸಿತು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 77.4 ಓವರ್‌ಗಳಲ್ಲಿ 219 (ಬೆತ್ ಮೂನಿ 40, ತಹಲಿಯಾ ಮೆಕ್‌ಗ್ರಾ 50, ಅಲೀಸಾ ಹೀಲಿ 38, ಕಿಮ್ ಗಾರ್ಥ್ ಔಟಾಗದೆ 28, ಪೂಜಾ ವಸ್ತ್ರಾಕರ್ 53ಕ್ಕೆ4, ಸ್ನೇಹಾ ರಾಣಾ 56ಕ್ಕೆ3, ದೀಪ್ತಿ ಶರ್ಮಾ 45ಕ್ಕೆ2) ಭಾರತ: 19 ಓವರ್‌ಗಳಲ್ಲಿ 1 ವಿಕೆಟ್‌ಗೆ 98 (ಶಫಾಲಿ ವರ್ಮಾ 40, ಸ್ಮೃತಿ ಮಂದಾನ ಬ್ಯಾಟಿಂಗ್ 43, ಸ್ನೇಹಾ ರಾಣಾ ಬ್ಯಾಟಿಂಗ್ 4, ಜೆಸ್ ಜಾನ್ಸನ್ 4ಕ್ಕೆ1)

ಅರ್ಧಶತಕ ಗಳಿಸಿದ ತಹಲಿಯಾ ಮೆಕ್‌ಗ್ರಾ ಮೂರು ಕ್ಯಾಚ್ ಕೈಚೆಲ್ಲಿದ ಭಾರತದ ಫೀಲ್ಡರ್‌ಗಳು ಶಫಾಲಿ–ಸ್ಮೃತಿ ಜೊತೆಯಾಟದಲ್ಲಿ ಸೇರಿದ 90 ರನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.