ನಾಗಪುರ: ಬಲಗೈ ಬ್ಯಾಟರ್ ಶುಭಮನ್ ಗಿಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿತು.
ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
249 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡವು 38.4 ಓವರ್‌ಗಳಲ್ಲಿ ಜಯಗಳಿಸಿತು. ಇದರಲ್ಲಿ ಗಿಲ್ (87; 96ಎ, 4X14) ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಶ್ರೇಯಸ್ ಅಯ್ಯರ್ (59; 36ಎ, 4X9, 6X2) ಮತ್ತು ಅಕ್ಷರ್ ಪಟೇಲ್ (52 ರನ್) ಉತ್ತಮ ಬೆಂಬಲ ನೀಡಿದರು.
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೇಗಿ ಹರ್ಷಿತ್ ರಾಣಾ (7 ಓವರ್‌ಗಳಲ್ಲಿ 53ಕ್ಕೆ3) ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (9 ಓವರ್‌ಗಳಲ್ಲಿ 26ಕ್ಕೆ3) ಅವರ ದಾಳಿಯ ಮುಂದೆ ಇಂಗ್ಲೆಂಡ್ ತಂಡವು 47.4 ಓವರ್‌ಗಳಲ್ಲಿ 248 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ನಾಯಕ ಜೋಸ್ ಬಟ್ಲರ್ (52; 67ಎ) ಮತ್ತು ಜೇಕಬ್ ಬೇಥೆಲ್ (51; 64ಎ) ಅವರು ಅರ್ಧಶತಕ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಭಾರತ ತಂಡವು ಇನಿಂಗ್ಸ್‌ನ ಆರಂಭದಲ್ಲಿಯೇ ಆಘಾತ ಅನುಭವಿಸಬೇಕಾಯಿತು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ (2 ರನ್) ಮತ್ತು ಯಶಸ್ವಿ ಜೈಸ್ವಾಲ್ (15 ರನ್) ಅವರಿಬ್ಬರೂ ಪೆವಿಲಿಯನ್ ಸೇರಿದಾಗ ತಂಡದ ಮೊತ್ತವು 19 ರನ್‌ಗಳಾಗಿದ್ದವು. ಈ ಹಂತದಲ್ಲಿ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಜೊತೆಗೂಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು.
ಇದೇ ಮೊದಲ ಬಾರಿ ಭಾರತದಲ್ಲಿ ಆಡುತ್ತಿರುವ ಜೇಕಬ್ ಬೇಥೆಲ್ ಅವರು ಶ್ರೇಯಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಜೊತೆಯಾಟ ಮುರಿಯಿತು. ಆದರೆ, ಇದರ ನಂತರವೇ ಇಂಗ್ಲೆಂಡ್ ಕೈಯಿಂದ ಪಂದ್ಯ ಜಾರಿಹೋಯಿತು. ಏಕೆಂದರೆ ಗಿಲ್ ಜೊತೆಗೂಡಿದ ಅಕ್ಷರ್ ಪಟೇಲ್ ತಂಡದ ಗೆಲುವನ್ನು ಖಚಿತಪಡಿಸಿದರು.
ಒಂದು ಕಡೆ ಗಿಲ್ ಅವರ ಆಕರ್ಷಕ ಡ್ರೈವ್ ಮತ್ತು ಫ್ಲಿಕ್‌ಗಳ ಆಟ ನಡೆದಿತ್ತು. ಇನ್ನೊಂದಡೆ ಎಡಗೈ ಆಲ್‌ರೌಂಡರ್ ಅಕ್ಷರ್ ಸ್ವೀಪ್, ಬ್ಯಾಕ್‌ಫುಟ್ ಆಟದ ಸೊಬಗು ಉಣಬಡಿಸಿದರು. 4ನೇ ವಿಕೆಟ್ ಜೊತೆಯಾಟದಲ್ಲಿ 108 ರನ್ ಸೇರಿಸಿದರು. ಸ್ಪಿನ್ನರ್ ಆದಿಲ್ ರಶೀದ್ ಎಸೆತದಲ್ಲಿ ಅಕ್ಷರ್ ಕ್ಲೀನ್‌ಬೌಲ್ಡ್ ಆಗುವ ಮುನ್ನ ತಂಡವು ಗೆಲುವಿನ ಸನಿಹ ಬಂದಿತ್ತು. ಗಿಲ್ ಶತಕದತ್ತ ಹೆಜ್ಜೆಯಿಟ್ಟಿದ್ದರು.
ಅದರೆ 6ನೇ ಕ್ರಮಾಂಕದಲ್ಲಿ ಬಂದ ಕೆ.ಎಲ್. ರಾಹುಲ್ (2) ಕೂಡ ಆದಿಲ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ನಿರ್ಗಮಿಸಿದರು. ನಂತರದ ಓವರ್‌ನಲ್ಲಿ ಸಕೀಬ್ ಮೊಹಮ್ಮದ್ ಎಸೆತವನ್ನು ಆಡುವ ಭರದಲ್ಲಿ ಗಿಲ್ ಅವರು ಬಟ್ಲರ್‌ಗೆ ಕ್ಯಾಚ್ ಕೊಟ್ಟರು. ಈ ಹಂತದಲ್ಲಿ ತುಸು ಆತಂಕ ಮೂಡಿತ್ತು.
ಆದರೆ ಆಲ್‌ರೌಂಡರ್ ಜೋಡಿ ಹಾರ್ದಿಕ್ ಪಾಂಡ್ಯ (ಔಟಾಗದೇ 9) ಮತ್ತು ಜಡೇಜ (ಔಟಾಗದೇ 12) ತಂಡವನ್ನು ಗೆಲುವಿನ ದಡ ಸೇರಿಸಿದರು.
ಜಡೇಜ ದಾಖಲೆ
ಈ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಪಡೆದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ದಾಖಲೆ ಬರೆದರು. ಅವರು ಇಂಗ್ಲೆಂಡ್ ಎದುರು ಒಟ್ಟು 42 ಪಡೆದರು. ಇದರೊಂದಿಗೆ ಇಂಗ್ಲೆಂಡ್ ಎದುರು 40ಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಭಾರತದ ಮೊದಲ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ಎದುರು ಈ ಸಾಧನೆ ಮಾಡಿದ ಏಕೈಕ ಭಾರತೀಯ ಕೂಡ ಅವರಾಗಿದ್ದಾರೆ ಎಂದು ಕ್ರಿಕೆಟ್ ಅಂಕಿ ಸಂಖ್ಯೆ ಪರಿಣತ ಎಚ್.ಆರ್. ಗೋಪಾಲಕೃಷ್ಣ ತಿಳಿಸಿದ್ದಾರೆ.
ರೋಹಿತ್ ವೈಫಲ್ಯ
ನಾಯಕ ರೋಹಿತ್ ಅವರ ಬ್ಯಾಟಿಂಗ್ ವೈಫಲ್ಯ ಈ ಸರಣಿಯಲ್ಲಿಯೂ ಮುಂದುವರಿಯಿತು. ಅವರು ಎಲ್ಲ ಮಾದರಿಗಳಲ್ಲಿಯೂ ಸೇರಿ 16 ಇನಿಂಗ್ಸ್‌ಗಳಲ್ಲಿ ಒಟ್ಟು 166 ಮಾತ್ರ ಗಳಿಸಿದ್ದಾರೆ. ಟಿ20 ವಿಶ್ವಕಪ್ ವಿಜಯದ ನಂತರ ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ.
ವಿರಾಟ್ ವಿಶ್ರಾಂತಿ
‘ಸೂಪರ್ ಸ್ಟಾರ್’ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮೊಣಕಾಲು ನೋವಿನಿಂದಾಗಿ ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ.
‘ಕೊಹ್ಲಿ ಅವರ ಬಲ ಮೊಣಕಾಲಿನಲ್ಲಿ ಸಣ್ಣಪ್ರಮಾಣದ ನೋವಿದೆ. ಅಷ್ಟೇನೂ ಗಂಭೀರ ಗಾಯವಲ್ಲ. ನಿನ್ನೆ (ಬುಧವಾರ) ರಾತ್ರಿಯಷ್ಠೇ ಈ ಬಗ್ಗೆ ತಿಳಿಯಿತು’ ಎಂದು ನಾಯಕ ರೋಹಿತ್ ಶರ್ಮಾ ಅವರು ಟಾಸ್ ಸಂದರ್ಭದಲ್ಲಿ ಹೇಳಿದರು.
ಬಿಸಿಸಿಐ ಕೂಡ ಈ ಕುರಿತು ಪ್ರಕಟಣೆ ನೀಡಿತು.
ಬುಧವಾರ ದ ನೆಟ್ಸ್‌ನಲ್ಲಿ ಕೊಹ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಿರಲಿಲ್ಲ. ನೋವಿನಿಂದಾಗಿ ಅವರು ಬೇಗನೆ ಅಭ್ಯಾಸ ಮುಗಿಸಿದ್ದರು. ಬಲಮೊಣಕಾಲಿಗೆ ದಪ್ಪ ಟೇಪ್ ಮಾಡಿದ್ದರು. ತಂಡದ ಫಿಸಿಯೊ ಕಮಲೇಶ್ ಜೈನ್ ಅವರು ಕೊಹ್ಲಿ ಆರೈಕೆ ಮಾಡುತ್ತಿದ್ದಾರೆ.
ಕಟಕ್‌ನಲ್ಲಿ ನಡೆಯಲಿರುವ ಮುಂದಿನ ಪಂದ್ಯಕ್ಕೆ ಅವರ ಲಭ್ಯತೆ ಬಗ್ಗೆ ಸ್ಪಷ್ಟವಾಗಿಲ್ಲ. ಅವರು ಗಾಯದ ಸ್ಕ್ಯಾನ್‌ಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ತೆರಳುವರೇ ಎಂಬ ಬಗ್ಗೆ ಕುತೂಹಲವೂ ಈಗ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.