ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್
(ರಾಯಿಟರ್ಸ್ ಚಿತ್ರ)
ಎಜ್‌ಬಾಸ್ಟನ್: ನಾಯಕನಿಗೆ ತಕ್ಕ ಆಟವಾಡಿದ ಶುಭಮನ್ ಗಿಲ್ ಇಂಗ್ಲೆಂಡ್ ಎದುರಿನ ಸತತ ಎರಡನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿದರು.
ತಂಡದ ವ್ಯವಸ್ಥಾಪನ ಮಂಡಳಿಯು ಆಯ್ಕೆ ಮಾಡಿದ ಹನ್ನೊಂದರ ಬಳಗದ ಕುರಿತ ಚರ್ಚೆಗಳು ಗರಿಗೆದರಿದ್ದ ಹೊತ್ತಿನಲ್ಲಿ ಗಿಲ್ ಆಟ ಚೇತೋಹಾರಿಯಾಗಿತ್ತು. ಬುಧವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಂಡವು ದಿನದಾಟದ ಕೊನೆಗೆ 85 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 310 ರನ್ ಗಳಿಸಿತು. ಗಿಲ್ (ಬ್ಯಾಟಿಂಗ್ 114) ಮತ್ತುರವೀಂದ್ರ ಜಡೇಜ (ಬ್ಯಾಟಿಂಗ್ 41) ಕ್ರೀಸ್‌ನಲ್ಲಿದ್ದಾರೆ.
ಚಹಾ ವಿರಾಮದ ನಂತರ ರಿಷಭ್ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರು ಪೆವಿಲಿಯನ್ ಸೇರಿದರು. ಈ ಹೊತ್ತಿನಲ್ಲಿ ಕ್ರೀಸ್‌ನಲ್ಲಿದ್ದ ಗಿಲ್ ಇನಿಂಗ್ಸ್ ಕಟ್ಟುವ ಹೊಣೆಯನ್ನು ತಮ್ಮ ಮೇಲೆಳೆದುಕೊಂಡರು. ಅವರಿಗೆ ಜಡೇಜ ಉತ್ತಮ ಜೊತೆ ನೀಡಿದರು. ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ 99 ರನ್ ಸೇರಿಸಿದರು.
ಬ್ಯಾಟಿಂಗ್‌ಗೆ ಸೂಕ್ತವಾಗಿದ್ದ ಪರಿಸ್ಥಿತಿ ಯನ್ನು ಸಮರ್ಥವಾಗಿ ಬಳಸಿಕೊಂಡ ಗಿಲ್, 12 ಬೌಂಡರಿ ಬಾರಿಸಿದರು. 216 ಎಸೆತಗಳನ್ನು ಎದುರಿಸಿದರು.
ಇಂಗ್ಲೆಂಡ್ ವಿರುದ್ದ ಸತತ ಎರಡು ಟೆಸ್ಟ್‌ಗಳಲ್ಲಿ ಶತಕ ದಾಖಲಿಸಿದ ಭಾರತದ ಮೂರನೇ ಬ್ಯಾಟರ್ ಆದರು. ಈ ಹಿಂದೆ ವಿಜಯ್ ಹಜಾರೆ ಮತ್ತು ಮೊಹಮ್ಮದ್ ಅಜರುದ್ದೀನ್ ಈ ಸಾಧನೆ ಮಾಡಿದ್ದರು.
ಯಶಸ್ವಿ ಬ್ಯಾಟಿಂಗ್: ಇಂಗ್ಲೆಂಡ್ ತಂಡದೊಂದಿಗೆ ತಮ್ಮ ‘ಸರಸ’ವನ್ನು ಯಶಸ್ವಿ ಜೈಸ್ವಾಲ್ ಮುಂದುವರಿಸಿದರು.
ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಯಶಸ್ವಿ ಈ ಪಂದ್ಯದಲ್ಲಿಯೂ ಮೂರಂಕಿಯತ್ತ ದಾಪುಗಾಲಿಟ್ಟಿದ್ದರು. ಆದರೆ ಚೆಂದದ 87 ರನ್ ಗಳಿಸಿದ ಅವರು ನಿರ್ಗಮಿಸಿದರು.
ಯುವ ಬ್ಯಾಟರ್ ಯಶಸ್ವಿ ಅವರು ಔಟಾಗುವ ಮುನ್ನ ತಮ್ಮ ಅಮೋಘ ಪ್ರತಿಭೆಯ ಆಳವನ್ನು ಮತ್ತೊಮ್ಮೆ ಪ್ರದರ್ಶಿಸಿದರು. ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆಯಾಗುವ ಸಮರ್ಥ ಆಟಗಾರ ತಾವು ಎಂಬುದನ್ನು ತೋರಿಸಿಕೊಟ್ಟರು. ಇನಿಂಗ್ಸ್ ಆರಂಭವಾದ ಮೊದಲ ಒಂದು ಗಂಟೆ ಮೋಡ ಮುಸುಕಿದ ವಾತಾವರಣವಿತ್ತು. ನಂತರ ಬಿಸಿಲು ಅರಳಿತು. ಜೈಸ್ವಾಲ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಅನುಭವಿ ಕೆ.ಎಲ್. ರಾಹುಲ್ ಅವರು ಈ ಅವಧಿಯಲ್ಲಿ ಇಂಗ್ಲೆಂಡ್ ವೇಗಿಗಳಾದ ಕ್ರಿಸ್ ವೋಕ್ಸ್ ಮತ್ತು ಜೋಶ್ ಟಂಗ್ ಅವರನ್ನು ಏಕಾಗ್ರತೆಯಿಂದ ಎದುರಿಸಿದರು. ಪಿಚ್ ಸತ್ವ ಮತ್ತು ವಾತಾವರಣದ ಲಾಭ ಪಡೆದ ಬೌಲರ್‌ಗಳು ಪರಿಣಾಮಕಾರಿ ದಾಳಿ ನಡೆಸಿದರು.
ಒಂದೆರಡು ಎಲ್‌ಬಿಡಬ್ಲ್ಯು ಅಪೀಲ್‌ಗಳಲ್ಲಿ ಸ್ವಲ್ಪ ಅಂತರದಲ್ಲಿ ‘ಜೀವದಾನ’ ಪಡೆದ ರಾಹುಲ್ 9ನೇ ಓವರ್‌ನಲ್ಲಿ ವೋಕ್ಸ್ ಎಸೆತವನ್ನು ಆಡುವ ಭರದಲ್ಲಿ ಸ್ಟಂಪ್‌ಗೆ ಎಳೆದುಕೊಂಡರು. ಅವರ ಆಟಕ್ಕೆ ತೆರೆಬಿತ್ತು. 36 ವರ್ಷ ವಯಸ್ಸಿನ ವೋಕ್ಸ್ ತಮ್ಮ ತವರು ಅಂಗಳದಲ್ಲಿ ಸಂಭ್ರಮಿಸಿದರು.
ಆದರೆ ಜೈಸ್ವಾಲ್ ಅವರು ಮಾತ್ರ ತದೇಕಚಿತ್ತದಿಂದ ಬೌಲರ್‌ಗಳನ್ನು ಎದುರಿಸಿದರು. ಕ್ರಮಾಂಕದಲ್ಲಿ ಬಡ್ತಿ ಪಡೆದ ಕರುಣ್ ನಾಯರ್ (31 ರನ್) ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಕನ್ನಡಿಗ ಕರುಣ್ ಅವರು ಚೆಂದದ ಕವರ್ ಡ್ರೈವ್‌ಗಳನ್ನು ಪ್ರಯೋಗಿಸಿದರು. ಆತ್ಮವಿಶ್ವಾಸದಿಂದ ಆಡುತ್ತಿದ್ದ ಕರುಣ್ ಅವರಿಗೆ ಬ್ರೈಡನ್ ಕಾರ್ಸ್ ಅಡ್ಡಿಯಾದರು. ಹ್ಯಾರಿ ಬ್ರೂಕ್ ಪಡೆದ ಚೆಂದದ ಕ್ಯಾಚ್‌ಗೆ ನಿರ್ಗಮಿಸಿದರು.
ನಾಯಕ ಗಿಲ್ ಜೊತೆಗೂಡಿದ ಜೈಸ್ವಾಲ್ ಮತ್ತೊಂದು ಪಾಲುದಾರಿಕೆ ಆಟಕ್ಕೆ ವೇದಿಕೆ ಸಿದ್ಧಗೊಳಿಸಿದರು. ಡ್ರೈವ್, ಕಟ್ ಮತ್ತು ಪುಲ್ ಹೊಡೆತಗಳ ಮೂಲಕ ಬೌಲರ್‌ಗಳ ತಂತ್ರಗಳನ್ನು ವಿಫಲಗೊಳಿಸಿದರು. ಯಾವ ಎಸೆತಗಳನ್ನು ದಂಡಿಸಬೇಕು ಮತ್ತು ಯಾವ ಎಸೆತ ಗಳನ್ನು ರಕ್ಷಣಾತ್ಮಕವಾಗಿ ಆಡಬೇಕು ಎಂಬ ತಂತ್ರಗಾರಿಕೆಯೊಂದಿಗೆ ಬ್ಯಾಟಿಂಗ್ ಮಾಡಿದರು. ಇದರ ನಡುವೆ ಚುರುಕಾದ ಒಂಟಿ ರನ್‌ಗಳನ್ನೂ ತಮ್ಮ ಬುಟ್ಟಿಗೆ ತುಂಬಿಕೊಂಡರು. ಇದರಿಂದಾಗಿ ಸ್ಕೋರ್ ಕಾರ್ಡ್ ಚಲನೆ ನಿರಂತರ ವಾಗಿತ್ತು. ಇಬ್ಬರೂ ಬ್ಯಾಟರ್‌ಗಳ ಹೊಂದಾಣಿಕೆ ಅಮೋಘವಾಗಿತ್ತು. ಬಿಸಿಲು ಪ್ರಖರ ವಾದಂತೆ ಪಿಚ್ ಕೂಡ ಫ್ಲ್ಯಾಟ್ ಆಯಿತು.
ಮೊದಲ ಟೆಸ್ಟ್‌ನಲ್ಲಿ ಮಾಡಿ ದಂತೆಯೇ ಇಂಗ್ಲೆಂಡ್ ಇಲ್ಲಿಯೂ ಭಾರತಕ್ಕೆ ತಿರುಗೇಟು ನೀಡಿತು. ಚಹಾ ವಿರಾಮಕ್ಕೆ ಇನ್ನೂ ಅರ್ಧಗಂಟೆ ಬಾಕಿ ಇದ್ದಾಗ ಜೊತೆಯಾಟಕ್ಕೆ ತಡೆಯೊಡ್ಡಿತು. ಆತಿಥೇಯ ನಾಯಕ ಬೆನ್ ಸ್ಟೋಕ್ಸ್ ತಮ್ಮ ಬೌಲಿಂಗ್ ನಲ್ಲಿ ಜೈಸ್ವಾಲ್ ಆಟಕ್ಕೆ ಕಡಿವಾಣ ಹಾಕಿದರು.
ರೆಡ್ಡಿ,ವಾಷಿಂಗ್ಟನ್, ಆಕಾಶ್‌ಗೆ ಸ್ಥಾನ; ಭಾರತ ಬ್ಯಾಟಿಂಗ್
ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಐದು ಪಂದ್ಯಗಳ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿಯಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 1-0 ಅಂತರದ ಮುನ್ನಡೆಯಲ್ಲಿದೆ.
ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಅಲ್ಲದೆ ಮೊದಲ ಪಂದ್ಯ ವಿಜೇತ ಆಂಗ್ಲರ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಮತ್ತೊಂದೆಡೆ ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ತರಲಾಗಿದೆ. ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ಸೂಚಿಸಲಾಗಿದೆ. ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಹಾಗೂ ಆಕಾಶ್ ದೀಪ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಿಂದಾಗಿ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಸಾಯಿ ಸುದರ್ಶನ್ ಅವಕಾಶ ವಂಚಿತರಾಗಿದ್ದಾರೆ. ಹಾಗೆಯೇ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡಲಾಗಿದೆ.
ಭಾರತ ತಂಡ ಇಂತಿದೆ:
ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರವೀಂದ್ರ ಜಡೇಜ, ವಾಷಿಂಗ್ಟನ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ.
ಇಂಗ್ಲೆಂಡ್ ತಂಡ ಇಂತಿದೆ:
ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಶ್ ಟಂಗ್, ಶೋಯಬ್ ಬಷೀರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.