ಆಕಾಶ್ ದೀಪ್
ಪಿಟಿಐ ಚಿತ್ರ
ಎಜ್‌ಬಾಸ್ಟನ್: ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವೇಗಿ ಆಕಾಶ್ ದೀಪ್ ಅವರ ಕರಾರುವಾಕ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ, 336 ರನ್ ಅಂತರದ ಸೋಲೊಪ್ಪಿಕೊಂಡಿತು. ಈ ಜಯದೊಂದಿಗೆ ಭಾರತ ತಂಡವು, ಸರಣಿಯಲ್ಲಿ 1–1 ಅಂತರದ ಸಮಬಲ ಸಾಧಿಸಿತು.
ಎಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 608 ರನ್‌ಗಳ ಬೃಹತ್ ಗುರಿ ಪಡೆದ ಆತಿಥೇಯ ತಂಡ, 271 ರನ್ ಗಳಿಸಲಷ್ಟೇ ಶಕ್ತವಾಯಿತು.
ದಿನದಾಟ ಆರಂಭವಾಗುವುದು ಮಳೆಯಿಂದಾಗಿ ಒಂದೂವರೆ ಗಂಟೆ ತಡವಾಯಿತು. ಹೀಗಾಗಿ, ಜಯದ ಅವಕಾಶ ಕೈತಪ್ಪಲಿದೆಯೇ ಎಂಬ ಆತಂಕ ಭಾರತ ಪಾಳೆಯದಲ್ಲಿ ಮೂಡಿತ್ತು. ಅದನ್ನು ವೇಗಿ ಆಕಾಶ್ ಹೋಗಲಾಡಿಸಿದರು.
ಐದನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಓಲಿ ಪೋಪ್ (24 ರನ್) ಹಾಗೂ ಹ್ಯಾರಿ ಬ್ರೂಕ್ (23 ರನ್) ಇಬ್ಬರನ್ನೂ ದಿನದಾಟದ ಆರಂಭದಲ್ಲೇ ಪೆವಿಲಿಯನ್‌ಗೆ ಅಟ್ಟಿದರು.
ಈ ಆರಂಭಿಕ ಯಶಸ್ಸು ಟೀಂ ಇಂಡಿಯಾ ವಿಶ್ವಾಸವನ್ನು ಇಮ್ಮಡಿಗೊಳಿಸಿತು. ಆದರೆ, ಈ ಹಂತದಲ್ಲಿ ಜೊತೆಯಾದ ನಾಯಕ ಬೆನ್ ಸ್ಟೋಕ್ಸ್ ಮತ್ತು ಜೆಮೀ ಸ್ಮಿತ್, 6ನೇ ವಿಕೆಟ್ ಪಾಲುದಾರಿಕೆಯಲ್ಲಿ 70 ರನ್ ಕೂಡಿಸಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಈ ಜೋಡಿಯನ್ನು ವಾಷಿಂಗ್ಟನ್ ಸುಂದರ್ ಬೇರ್ಪಡಿಸಿದರು.
ಇನಿಂಗ್ಸ್‌ನ 42ನೇ ಓವರ್‌ನಲ್ಲಿ ಸ್ಟೋಕ್ಸ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದ ಸುಂದರ್, ಭಾರತವನ್ನು ಜಯದ ಹಾದಿಗೆ ತಂದು ನಿಲ್ಲಿಸಿದರು. ಆದರೆ, ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ರನ್ ಗಳಿಸುವುದನ್ನು ಮುಂದುವರಿಸಿದ ಜೆಮೀ ಸ್ಮಿತ್ ಏಕಾಂಗಿ ಹೋರಾಟ ನಡೆಸಿದರು. 88 ರನ್ ಗಳಿಸಿದ್ದ ಅವರನ್ನೂ ವಾಪಸ್ ಕಳುಹಿಸಿದ ಆಕಾಶ್, ಟೀಂ ಇಂಡಿಯಾ ಗೆಲುವನ್ನು ಖಾತ್ರಿ ಮಾಡಿದರು.
48 ಎಸೆತಗಳಲ್ಲಿ 38 ರನ್ ಗಳಿಸಿ ಕೊನೆಯಲ್ಲಿ ಕಾಡಿದ ಬ್ರೇಯ್ಡನ್ ಕೇರ್ಸ್ ಅವರನ್ನೂ ಔಟ್ ಮಾಡಿದ ಆಕಾಶ್, ಜಯದ ರೂವಾರಿಯಾದರು. ಶೋಯಬ್ ಬಷೀರ್ 12 ರನ್ ಗಳಿಸಿ ಅಜೇಯವಾಗಿ ಉಳಿದರು.
ಬೂಮ್ರಾ ಅನುಪಸ್ಥಿತಿಯಲ್ಲಿ ಮಿಂಚಿದ ಆಕಾಶ್
ಪರಿಣತ ವೇಗಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಆಕಾಶ್, ಟೀ ಇಂಡಿಯಾವನ್ನು ಜಯದೆಡೆಗೆ ಮುನ್ನಡೆಸಿದರು.
ಮೊದಲ ಇನಿಂಗ್ಸ್‌ನಲ್ಲಿ 88 ರನ್ ನೀಡಿ 4 ವಿಕೆಟ್ ಪಡೆದಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು. 99 ರನ್ ನೀಡಿ ಪ್ರಮುಖ 6 ವಿಕೆಟ್ ಕಿತ್ತರು.
ಉಳಿದಂತೆ ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ ಮತ್ತು ಪ್ರಸಿದ್ಧ ಕೃಷ್ಣ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.