ADVERTISEMENT

ಲಾರ್ಡ್ಸ್‌ ಟೆಸ್ಟ್‌ನಲ್ಲಿ 5 ವಿಕೆಟ್ ಉರುಳಿಸಿದರೂ ಸಂಭ್ರಮಿಸದ ಬೂಮ್ರಾ: ಕಾರಣವೇನು?

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 10:29 IST
Last Updated 12 ಜುಲೈ 2025, 10:29 IST
<div class="paragraphs"><p>ಜಸ್‌ಪ್ರೀತ್‌ ಬೂಮ್ರಾ</p></div>

ಜಸ್‌ಪ್ರೀತ್‌ ಬೂಮ್ರಾ

   

ರಾಯಿಟರ್ಸ್‌ ಚಿತ್ರ

ಲಾರ್ಡ್ಸ್‌: 'ಹೋಮ್ ಆಫ್‌ ಕ್ರಿಕೆಟ್' ಖ್ಯಾತಿಯ ಲಾರ್ಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಐದು ವಿಕೆಟ್‌ ಉರುಳಿಸಿದ್ದಾರೆ. ಇದರೊಂದಿಗೆ, 'ಕ್ರಿಕೆಟ್‌ ಕಾಶಿ'ಯಲ್ಲಿ 5 ವಿಕೆಟ್‌ ಗೊಂಚಲು ಸಾಧನೆ ಮಾಡಿದ ಟೀಂ ಇಂಡಿಯಾದ 9ನೇ ಬೌಲರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ADVERTISEMENT

ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 251 ರನ್‌ ಗಳಿಸಿದ್ದ ಆಂಗ್ಲರಿಗೆ, ಬೂಮ್ರಾ ಎರಡನೇ ದಿನದಾಟದ ಆರಂಭದಲ್ಲೇ ಆಘಾತ ನೀಡಿದರು. ಹೀಗಾಗಿ, ಪ್ರಥಮ ಇನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಕಟ್ಟಿಹಾಕಲು ಸಾಧ್ಯವಾಯಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 43 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಿದ್ದು, ಎದುರಾಳಿಯ ಲೆಕ್ಕ ಚುಕ್ತಾ ಮಾಡಲು ಇನ್ನೂ 242 ರನ್‌ ಗಳಿಸಬೇಕಿದೆ.

27 ಓವರ್ ಬೌಲಿಂಗ್ ಮಾಡಿದ ಬೂಮ್ರಾ 74 ರನ್‌ ನೀಡಿ 5 ವಿಕೆಟ್‌ ಪಡೆದರು. ಇದು, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ) ದೇಶಗಳಲ್ಲಿ ಅವರು ಗಳಿಸಿದ 11ನೇ ಐದರ ಗೊಂಚಲಾಗಿದೆ. ಒಟ್ಟಾರೆ ಅವರು ಟೆಸ್ಟ್‌ ಮಾದರಿಯಲ್ಲಿ 15 ಸಲ ಈ ಸಾಧನೆ ಮಾಡಿದ್ದಾರೆ.

ಇಂತಹ ಸಾಧನೆ ಮಾಡಿದರೂ ಸಂಭ್ರಮಿಸದ ಬೂಮ್ರಾ, ದಿನದಾಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕಾರಣ ತಿಳಿಸಿದ್ದಾರೆ.

'ವಾಸ್ತವವೇನೆಂದರೆ, ನಾನು ದಣಿದಿದ್ದೆ. ಉತ್ಸಾಹವಿರಲಿಲ್ಲ. ಮೈದಾನದಲ್ಲಿ ಸಾಕಷ್ಟು ಓವರ್‌ ಬೌಲಿಂಗ್‌ ಮಾಡಿ, ಸುಸ್ತಾಗಿದ್ದೆ' ಎಂದಿದ್ದಾರೆ.

ಮುಂದುವರಿದು, 'ಜಿಗಿದು ಸಂಭ್ರಮಿಸಲು ನಾನೇನು ಈಗ 21–22 ವರ್ಷದವನಲ್ಲ. ಸಾಮಾನ್ಯವಾಗಿ ನಾನು ಹಾಗೆ ಮಾಡುವುದಿಲ್ಲ. ತಂಡಕ್ಕೆ ನೆರವಾಗಿದ್ದಕ್ಕೆ ಸಂತೋಷವಾಯಿತು. ಅದನ್ನು ಬಿಟ್ಟರೆ, ವಾಪಸ್‌ ಹೋಗಿ ಮುಂದಿನ ಎಸೆತ ಹಾಕಲು ಬಯಸಿದ್ದೆ' ಎಂದು ಹೇಳಿದ್ದಾರೆ.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ (ಲೀಡ್ಸ್‌ನಲ್ಲಿ) ಆಡಿದ್ದ ಬೂಮ್ರಾ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಸಾಧನೆ ಮಾಡಿದ್ದರೂ, ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ಪಡೆಯಲು ವಿಫಲರಾಗಿದ್ದರು. ಎಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದರು. ಇದೀಗ, ಲಾರ್ಡ್ಸ್‌ನಲ್ಲಿ 3ನೇ ಪಂದ್ಯದಲ್ಲಿ ಆಡುತ್ತಿದ್ದಾರೆ.

ಸರಣಿಯ ಮೊದಲ ಪಂದ್ಯವನ್ನು ಆತಿಥೇಯರು ಗೆದ್ದರೆ, ಎರಡನೇ ಪಂದ್ಯವನ್ನು ಪ್ರವಾಸಿ ಪಡೆ ಜಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.