ADVERTISEMENT

IND vs NZ 1st Test: ಅಯ್ಯರ್ ಪದಾರ್ಪಣೆಗೆ ಶತಕದ ’ಶ್ರೇಯ‘

ಗ್ರೀನ್‌ ಪಾರ್ಕ್‌ನಲ್ಲಿ ಭಾರತದ ಬೌಲರ್‌ಗಳಿಗೆ ಯಂಗ್–ಟಾಮ್ ದಿಟ್ಟ ಉತ್ತರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 15:37 IST
Last Updated 26 ನವೆಂಬರ್ 2021, 15:37 IST
ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕದ ಸಂಭ್ರಮ  –ಎಎಫ್‌ಪಿ ಚಿತ್ರ
ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕದ ಸಂಭ್ರಮ –ಎಎಫ್‌ಪಿ ಚಿತ್ರ   

ಕಾನ್ಪುರ: ಐದು ದಶಕಗಳ ಹಿಂದೆ ಕನ್ನಡಿಗ ಜಿ.ಆರ್. ವಿಶ್ವನಾಥ್ ತಮ್ಮ ಪದಾರ್ಪಣೆಯ ಟೆಸ್ಟ್ ನಲ್ಲಿ ಶತಕ ದಾಖಲಿಸಿದ ಗ್ರೀನ್‌ ಪಾರ್ಕ್‌ನಲ್ಲಿ ಶುಕ್ರವಾರ ಮುಂಬೈಕರ್ ಶ್ರೇಯಸ್ ಅಯ್ಯರ್ ಕೂಡ ತಮ್ಮ ಹೆಜ್ಜೆಗುರುತು ಮೂಡಿಸಿದರು.

ತಡವಾಗಿಯಾದರೂ ಭಾರತ ಟೆಸ್ಟ್‌ ತಂಡದಲ್ಲಿ ತಮಗೆ ಸ್ಥಾನ ಸಿಕ್ಕಿದ್ದನ್ನು ಸಮರ್ಥಿಸಿಕೊಂಡ ಶ್ರೇಯಸ್ ಶತಕ (105; 171ಎಸೆತ, 13ಬೌಂಡರಿ 2ಸಿಕ್ಸರ್) ಬಾರಿಸಿದರು. ಅವರ ದಿಟ್ಟ ಆಟದಿಂದಾಗಿ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 111.1 ಓವರ್‌ಗಳಲ್ಲಿ 345 ರನ್‌ ಗಳಿಸಿತು.

ಅದಕ್ಕುತ್ತರವಾಗಿ ಭರ್ಜರಿ ಆರಂಭ ಮಾಡಿರುವ ಪ್ರವಾಸಿ ಬಳಗವು ಶುಕ್ರವಾರ ದಿನದಾಟದ ಕೊನೆಗೆ 57 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿತು. ಆರಂಭಿಕ ಬ್ಯಾಟರ್‌ಗಳಾದ ಟಾಮ್ ಲಥಾಮ್ (ಬ್ಯಾಟಿಂಗ್ 50) ಮತ್ತು ವಿಲ್ ಯಂಗ್ (ಬ್ಯಾಟಿಂಗ್ 75) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಮೊದಲ ದಿನವಾದ ಗುರುವಾರ ತಂಡದ ಇನಿಂಗ್ಸ್‌ಗೆ ಬಲ ತುಂಬಿದ್ದ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜ ಜೋಡಿಯು ಎರಡನೇ ದಿನವೂ ದೀರ್ಘ ಇನಿಂಗ್ಸ್‌ ಆಡುವ ನಿರೀಕ್ಷೆ ಈಡೇರಲಿಲ್ಲ. ಕೇವಲ 27 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಭಾರತ ತಂಡವು ಕಳೆದುಕೊಂಡಿತು. ಟಿಮ್ ಸೌಥಿ (69ಕ್ಕೆ5) ಮತ್ತು ಎಜಾಜ್ ಪಟೇಲ್ (90ಕ್ಕೆ2) ಅವರ ಬೌಲಿಂಗ್‌ ಪರಿಣಾಮಕಾರಿಯಾಗಿತ್ತು. ಭಾರತದ ಮಟ್ಟಿಗೆ ಗಮನ ಸೆಳೆದಿದ್ದು ಶ್ರೇಯಸ್ ಆಟವೊಂದೇ.

ದಿನದ ಮೂರನೇ ಓವರ್‌ನಲ್ಲಿಯೇ ಟಿಮ್ ಸೌಥಿ ಎಸೆತವನ್ನು ತಪ್ಪಾಗಿ ಅಂದಾಜಿಸಿದ ರವೀಂದ್ರ ಜಡೇಜ ಕ್ಲೀನ್‌ಬೌಲ್ಡ್ ಆದರು. ನಿನ್ನೆಯ ತಮ್ಮ ಸ್ಕೋರ್‌ಗೆ ಒಂದೂ ರನ್ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ವೃದ್ಧಿಮಾನ್ ಸಹಾ ಕೇವಲ ಒಂದು ರನ್ ಗಳಿಸಿ ನಿರ್ಮಿಸಲು ಟಿಮ್ ಸೌಥಿಯೇ ಕಾರಣರಾದರು.ಬಲಗೈ ಬ್ಯಾಟ್ಸ್‌ಮನ್ ಶ್ರೇಯಸ್ ತಾವೆದುರಿಸಿದ 157ನೇ ಎಸೆತದಲ್ಲಿ ಚೊಚ್ಚಲ ಶತಕದ ಗಡಿ ಮುಟ್ಟಿದರು. ಅಯ್ಯರ್ ಜೊತೆಗೂಡಿದ ಅಶ್ವಿನ್ (38; 56ಎಸೆತ) ಮೊತ್ತ ಮುನ್ನೂರು ದಾಟಲು ಕಾರಣರಾದರು. ಅಯ್ಯರ್ ವಿಕೆಟ್ ಕೂಡ ಸೌಥಿ ಪಾಲಾಯಿತು.

ಅಕ್ಷರ್ ಪಟೇಲ್ ಕೂಡ ಸೌಥಿಗೆ ವಿಕೆಟ್‌ ಒಪ್ಪಿಸಿದರು. ಊಟದ ವಿರಾಮದ ಸ್ವಲ್ಪ ಹೊತ್ತಿನ ನಂತರ ಭಾರತದ ಇನಿಂಗ್ಸ್‌ಗೆ ಸ್ಪಿನ್ನರ್ ಎಜಾಜ್‌ ಪಟೇಲ್ ತೆರೆ ಎಳೆದರು.

ಯಂಗ್‌–ಟಾಮ್ ಜಿಗುಟುತನ
ಎರಡನೇ ದಿನವೇ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಕಿವೀಸ್ ಆರಂಭಿಕ ಜೋಡಿಯು ಅಪಾರ ತಾಳ್ಮೆ ಮತ್ತು ಕೌಶಲಪೂರ್ಣವಾಗಿ ಬ್ಯಾಟಿಂಗ್ ಮಾಡಿತು. ಮುರಿಯದ ಮೊದಲ ವಿಕೆಟ್ ಜೊತೆಯಾಟ ರಂಗೇರಿತು.

ರನ್‌ ಗಾಗಿ ಓಡುತ್ತಿರುವ ವಿಲ್‌ ಯಂಗ್ ಮತ್ತು ಟಾಮ್ ಲಾಥಮ್

ಭಾರತದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯ ಆಡುತ್ತಿರುವ ವಿಲ್ ಯಂಗ್ಅನುಭವಿ ಸ್ಪಿನ್ನರ್‌ ಅಶ್ವಿನ್, ಜಡೇಜ ಮತ್ತು ಅಕ್ಷರ್ ಪಟೇಲ್ ಅವರನ್ನು ಆತ್ಮವಿಶ್ವಾಸದಿಂದ ಎದುರಿಸಿದರು.ಪೆಡಲ್ ಸ್ವೀಪ್, ಬ್ಯಾಕ್‌ಫುಟ್‌ ಶಾಟ್‌ಗಳನ್ನು ಕರಾರುವಾಕ್‌ ಆಗಿ ಪ್ರಯೋಗಿಸಿದರು.

ಇನ್ನೊಂದು ಕಡೆಯಲ್ಲಿದ್ದ ಟಾಮ್ ಕೂಡ ತಮ್ಮ ಅನುಭವವನ್ನು ಪಣಕ್ಕೊಡ್ಡಿ ಆಡಿದರು. ಇಬ್ಬರಿಗೂ ಅದೃಷ್ಟವೂ ಜೊತೆಗಿತ್ತು. ಟಾಮ್ ಲಥಾಮ್ ವಿರುದ್ಧ ಮೂರು ಬಾರಿ ನೀಡಲಾಗಿದ್ದ ಔಟ್ ತೀರ್ಪು, ಮರುಪರಿಶೀಲನೆಯಲ್ಲಿ ನಾಟ್‌ಔಟ್‌ ಎಂದು ಬಂದಿತ್ತು. ಇದರಿಂದಾಗಿ ಅವರಿಬ್ಬರೂ ಮೂರನೇ ದಿನ ಬೆಳಿಗ್ಗೆಯೂ ತಮ್ಮ ಆಟ ಮುಂದುವರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.