ಶತಕ ಸಿಡಿಸಿದ ನಂತರ ಸಮೀರ್ ಮಿನ್ಹಾಸ್ ಸಂಭ್ರಮ
ಕೃಪೆ: X / Sony Sports
ದುಬೈ: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡ, ಭಾರತಕ್ಕೆ 348 ರನ್‌ಗಳ ಬೃಹತ್ ಗುರಿಯೊಡ್ಡಿದೆ.
ದುಬೈನ್ ಐಸಿಸಿ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆ ಪಾಕ್ ಪಡೆ, ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಬಾರಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ ಕಲೆಹಾಕಿದೆ.
113 ಎಸೆತಗಳನ್ನು ಎದುರಿಸಿದ ಮಿನ್ಹಾಸ್, 9 ಸಿಕ್ಸರ್ ಮತ್ತು 17 ಬೌಂಡರಿ ಸಹಿತ 172 ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ, ಉಸ್ಮಾನ್ ಖಾನ್ (35), ಅಹ್ಮದ್ ಹುಸೈನ್ (56) ಮಾತ್ರವೇ ಅಲ್ಪ ಕಾಣಿಕೆ ನೀಡಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬರಲಿಲ್ಲ.
ದಿಢೀರ್ ಕುಸಿತ
ಮಿನ್ಹಾಸ್ ಅವರ ಏಕಾಂಗಿ ಹೋರಾಟದ ನೆರವಿನಿಂದ ಪಾಕ್ ಪಡೆ ಕೇವಲ 42.4 ಓವರ್‌ಗಳಲ್ಲೇ 302 ರನ್ ಗಳಿಸಿತ್ತು. ನಂತರದ ಎಸೆತದಲ್ಲಿ ದೀಪೇಶ್ ದೇವೇಂದ್ರನ್ ಅವರು ಮಿನ್ಹಾಸ್ ವಿಕೆಟ್ ಪಡೆದರು. ನಂತರ ಫರ್ಹಾನ್ ಯೂಸಫ್ ಪಡೆ ದಿಢೀರ್ ಕುಸಿತ ಕಂಡಿತು.
ಕೊನೆಯ 7.2 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಪಡೆದು 47 ರನ್ ಬಿಟ್ಟುಕೊಟ್ಟ ಭಾರತ, ಎದುರಾಳಿಯನ್ನು 350ರ ಗಡಿ ದಾಟದಂತೆ ನಿಯಂತ್ರಿಸಿತು.
ಭಾರತದ ಪರ ದೀಪೇಶ್ ದೇವೇಂದ್ರನ್ 3 ವಿಕೆಟ್ ಪಡೆದರೆ, ಹೆನಿಲ್ ಪಟೇಲ್ ಮತ್ತು ಖಿಲಾನ್ ಪಟೇಲ್ ತಲಾ ಎರಡು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಕನಿಷ್ಕ್ ಚೌಹಾಣ್ ಪಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.