ADVERTISEMENT

T20 WC: ಭಾರತ ಪಂದ್ಯ ಬಹಿಷ್ಕಾರ ನಿರ್ಧಾರ ಕೈಬಿಟ್ಟ ಪಾಕಿಸ್ತಾನ; ಪ್ರಹಸನಕ್ಕೆ ತೆರೆ

ಪಿಟಿಐ
Published 9 ಫೆಬ್ರುವರಿ 2026, 19:59 IST
Last Updated 9 ಫೆಬ್ರುವರಿ 2026, 19:59 IST
   

ಇಸ್ಲಾಮಾಬಾದ್/ಢಾಕಾ: ಇದೇ 15ರಂದು ಭಾರತದ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಣಕ್ಕಿಳಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ. ಇದರೊಂದಿಗೆ ಹತ್ತು ದಿನಗಳ ಪ್ರಹಸನಕ್ಕೆ ತೆರೆಬಿದ್ದಿದೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶದವರು ಕ್ರಿಕೆಟ್‌ ಆಡಲು ಒಪ್ಪಿಸಿದ ನಂತರ ಪಾಕ್‌ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಸ್ನೇಹಪರ ರಾಷ್ಟ್ರಗಳ ಕೋರಿಕೆಯ ಮೇರೆಗೆ ಪಾಕ್‌ ತಂಡಕ್ಕೆ ಭಾರತದ ವಿರುದ್ಧ ಆಡಲು ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ‌  

ಆಟದ ಹಿತದೃಷ್ಟಿಯಿಂದ ಬಹಿಷ್ಕಾರ ನಿರ್ಧಾರ ದಿಂದ ಹಿಂದೆ ಸರಿಯುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮುಖ್ಯಸ್ಥ ಅಮಿನುಲ್ ಇಸ್ಲಾಂ ಅವರು ಪಾಕಿಸ್ತಾನಕ್ಕೆ ಮನವಿ ಮಾಡಿದ್ದರು.

ADVERTISEMENT

ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರೂ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಅವರಿಗೆ ಕರೆ ಮಾಡಿ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಪಾಕ್‌ ಸರ್ಕಾರದ ನಿರ್ಧಾರ ಕೈಗೊಂಡಿದೆ. ಈ ಬೆಳವಣಿಗೆಯಿಂದಾಗಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಎ ಗುಂಪಿನ ಪಂದ್ಯವು ಕೊಲಂಬೊದಲ್ಲಿ ನಿಗದಿಯಂತೆ ನಡೆಯಲಿದೆ. 

ಈ ಬೆಳವಣಿಗೆಗೂ ಮುನ್ನ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಭಾರತ ವಿರುದ್ಧ ಪಂದ್ಯವನ್ನು ತಮ್ಮ ದೇಶ ಬಹಿಷ್ಕರಿಸುವುದಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಮುಂದಿನ 24 ಗಂಟೆಗಳಲ್ಲಿ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದರು.

ಬಿಸಿಬಿ ಮುಖ್ಯಸ್ಥ ಅಮಿನುಲ್ ಇಸ್ಲಾಂ ಅವರನ್ನು ಒಳಗೊಂಡಂತೆ ಐಸಿಸಿ ಜೊತೆ ಸರಣಿ ಮಾತುಕತೆ ನಡೆಸಿರುವುದನ್ನು ಅವರು ಒಪ್ಪಿಕೊಂಡರು.  ಬಹಿಷ್ಕಾರದ ನಂತರ ಉದ್ಭವಿಸಿರುವ ಕೆಲವು ವಿಷಯಗಳಿಗೆ ಸಂಬಂಧಿಸಿ ಐಸಿಸಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಪ್ರತಿಕ್ರಿಯೆಗಳಿಗೆ ಕಾಯುತ್ತಿರುವುದಾಗಿ ನಖ್ವಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. 

‘ನಾವು ಅವರೊಂದಿಗೆ (ಐಸಿಸಿ) ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ಈಗ ಯಾವುದೇ ವಿವರ ನೀಡುವುದು ನನಗೆ ಸೂಕ್ತವೆನಿಸುತ್ತಿಲ್ಲ. ಅವರ ಪ್ರತಿಕ್ರಿಯೆಗಳು ಬಂದ ನಂತರ ನಾವು ನಿರ್ಧಾರಕ್ಕೆ ಬರುತ್ತೇವೆ. ಐಸಿಸಿ ಉತ್ತರಿಸಿದ ಬಳಿಕ ನಾವು ಮತ್ತೆ ಪ್ರಧಾನಿಯವರ (ಶಹಬಾಜ್ ಶರೀಫ್) ಬಳಿ ಹೋಗುತ್ತೇವೆ’ ಎಂದು ಅವರು ಹೇಳಿದ್ದರು.  

‘ನಾವು ನಮ್ಮ ಅತಿಥಿಗಳನ್ನು ಗೌರವಿಸುತ್ತೇವೆ. ಐಸಿಸಿ ನಮ್ಮ ಬಳಿಗೆ ಬಂದಿದೆ. ನಾವು ಅವರಿಗೆ ಗೌರವ ಕೊಡುತ್ತೇವೆ. ಐಸಿಸಿ ಮತ್ತು ಬಾಂಗ್ಲಾದೇಶ ನಡುವಣ ಮಾತುಕತೆ ಪ್ರಗತಿಯಲ್ಲಿರುವ ಕಾರಣ ಈಗಿನ ಪರಿಸ್ಥಿತಿ ಯಲ್ಲಿ ನಾವೇನೂ ಹೇಳುವಂತಿಲ್ಲ. ಬಾಂಗ್ಲಾದೇಶದ ನಿಲುವು ಸರಿಯಾಗಿದ್ದ ಕಾರಣ ನಾವು ಅವರ ಬೆನ್ನಿಗೆ ನಿಂತೆವು’ ಎಂದೂ ಅವರು ಹೇಳಿದ್ದರು.

ಭದ್ರತೆಯ ಆತಂಕದ ಕಾರಣಗಳನ್ನು ಒಡ್ಡಿ ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ನಂತರ ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಹೊರಗಿಡಲಾಗಿದೆ. ಐಸಿಸಿ ಕ್ರಮ ಕೈಗೊಳ್ಳುವ ಎಚ್ಚರಿಕೆಯಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಒತ್ತಡಕ್ಕೆ ಸಿಲುಕಿದೆ ಎಂಬ ಮಾತುಗಳನ್ನು ಅವರು ತಳ್ಳಿಹಾಕಿದ್ದರು.

ಐಸಿಸಿಯ ಡೆಪ್ಯೂಟಿ ಚೇರ್‌ಮನ್‌ ಇಮ್ರಾನ್‌ ಖ್ವಾಜಾ ಅವರೊಂದಿಗೆ ಭಾನುವಾರ ನಡೆಸಿದ ಮಾತುಕತೆಯ ವೇಳೆ ನಖ್ವಿ ಅವರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು ಎನ್ನಲಾಗಿದೆ. ಭಾರತ–ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸರಣಿ ಪುನರಾರಂಭ ಮಾಡುವುದು, ಬಾಂಗ್ಲಾದೇಶ ಒಳಗೊಂಡು ತ್ರಿಕೋನ ಸರಣಿ ನಡೆಸುವುದು ಇವುಗಳಲ್ಲಿ ಒಳಗೊಂಡಿದೆ. ಭಾರತ– ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಪುನರಾರಂಭಿಸುವುದು ಐಸಿಸಿ ವ್ಯಾಪ್ತಿಗೆ ಬರುತ್ತಿಲ್ಲ. ಆದರೆ ತ್ರಿಕೋನ ಸರಣಿಯ ಪ್ರಸ್ತಾವವನ್ನು ಐಸಿಸಿ ತಕ್ಷಣಕ್ಕೆ ತಿರಸ್ಕರಿಸಿದೆ.

ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಹೊರಗಿಟ್ಟ ಐಸಿಸಿ ಕ್ರಮವನ್ನು ಪಾಕಿಸ್ತಾನ ವಿರೋಧಿಸಿತ್ತು. ಬಾಂಗ್ಲಾಕ್ಕೆ ಬೆಂಬಲ ಸೂಚಿಸಿ ಭಾರತ ವಿರುದ್ಧ ಪಂದ್ಯಕ್ಕೆ ಪಾಕಿಸ್ತಾನ ಬಹಿಷ್ಕಾರ ಹಾಕಿತ್ತು.

ಬಿಸಿಬಿಗೆ ನಿರ್ಬಂಧ ವಿಧಿಸುವುದಿಲ್ಲ: ಐಸಿಸಿ

ದುಬೈ: ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮೇಲೆ ಯಾವುದೇ ನಿರ್ಬಂಧ ಅಥವಾ ದಂಡ ವಿಧಿಸುವುದಿಲ್ಲ ಎಂದು ಐಸಿಸಿ ಸೋಮವಾರ ತಿಳಿಸಿದೆ.

ಬಿಸಿಬಿ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಜೊತೆ ಮಾತುಕತೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಬಿಗೆ ಯಾವುದೇ ಆರ್ಥಿಕ, ಕ್ರೀಡಾ ಅಥವಾ ಆಡಳಿತಾತ್ಮಕ ನಿರ್ಬಂಧ ವಿಧಿಸುವುದಿಲ್ಲ. ಮಾತುಕತೆಯ ಭಾಗವಾಗಿ 2028 ಮತ್ತು 2031ರ ನಡುವೆ ಐಸಿಸಿ ಟೂರ್ನಿಯೊಂದಕ್ಕೆ ಬಾಂಗ್ಲಾದೇಶ ಆತಿಥ್ಯವನ್ನೂ ವಹಿಸಲಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿ ಬಾಂಗ್ಲಾದೇಶವು ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸಿತ್ತು. ಅದರ ಬದಲು ಸ್ಕಾಟ್ಲೆಂಡ್ ಅವಕಾಶ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.