ADVERTISEMENT

ಉಭಯ ತಂಡಗಳ ‘ಜಿದ್ದಾಜಿದ್ದಿ’ ಅಂತ್ಯ?: ಭಾರತ ತಂಡಕ್ಕೆ ಸಾಟಿಯಾಗದ ಪಾಕ್‌ ಪಡೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 22:30 IST
Last Updated 16 ಫೆಬ್ರುವರಿ 2026, 22:30 IST
<div class="paragraphs"><p>ಭಾರತ ತಂಡದ ಜಸ್‌ಪ್ರೀತ್ ಬೂಮ್ರಾ, ಇಶಾನ್ ಕಿಶನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಸಂಭ್ರಮ</p></div>

ಭಾರತ ತಂಡದ ಜಸ್‌ಪ್ರೀತ್ ಬೂಮ್ರಾ, ಇಶಾನ್ ಕಿಶನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಸಂಭ್ರಮ

   

ಕೊಲಂಬೊ: ಸ್ಪಿನ್‌ ಬೌಲರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಪಾಕಿಸ್ತಾನ ತಂಡದ ಎದುರಿನ ಪಂದ್ಯವು ಭಾರತ ತಂಡಕ್ಕೆ ಈ ಟೂರ್ನಿಯ ಗುಂಪು ಹಂತದ ದೊಡ್ಡ ಪರೀಕ್ಷೆ ಎಂದು ಹೇಳಲಾಗಿತ್ತು. ಆದರೆ ಸೂರ್ಯಕುಮಾರ್ ಯಾದವ್ ಬಳಗವು ಸಾಧಿಸಿದ ಗೆಲುವನ್ನು ನೋಡಿದರೆ ಉಭಯ ತಂಡಗಳ ನಡುವೆ ಇನ್ನೂ ‘ಉತ್ಕಟ ಜಿದ್ದಾಜಿದ್ದಿ’ ಉಳಿದಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅಷ್ಟರ ಮಟ್ಟಿಗೆ ಭಾರತವು ಏಕಪಕ್ಷೀಯ ಜಯದಾಖಲಿಸಿತು. 

ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡವು 61 ರನ್‌ಗಳಿಂದ ಗೆದ್ದಿತು. ಆರಂಭಿಕ ಬ್ಯಾಟರ್ ಇಶಾನ್ ಕಿಶನ್ 44 ಎಸೆತಗಳಲ್ಲಿ 77 ರನ್‌ ಗಳಿಸಿ ತಂಡದ ಗೆಲುವಿಗೆ ಬಲ ತುಂಬಿದರು. ಚೆಂಡು ನಿಧಾನ ಮತ್ತು ಕೆಳಮಟ್ಟದ ಪುಟಿತವಾಗುವ ಪಿಚ್‌ ಅನ್ನೇ ಅಣಕ ಮಾಡುವಂತೆ ಬೌಲಿಂಗ್ ಮಾಡಿದ ಭಾರತದ ವೇಗಿಗಳು ಸಾಮರ್ಥ್ಯ ಮೆರೆದರು. ಸ್ಪಿನ್ನರ್‌ಗಳೂ ಮೋಡಿ ಮಾಡಿದರು. ಈ ಗೆಲುವಿನೊಂದಿಗೆ ಸೂಪರ್ 8 ಹಂತವನ್ನೂ ಭಾರತ ಪ್ರವೇಶಿಸಿತು. 

ADVERTISEMENT

ಕಳೆದ ಒಂದು ದಶಕದಲ್ಲಿ ಭಾರತ ತಂಡವು ಪಾಕ್ ವಿರುದ್ಧ ತನ್ನ ಬಿಗಿಹಿಡಿತ ಸಾಧಿಸುತ್ತ ಬಂದಿದೆ. ಒಂದೆರಡು ಬಾರಿ ವ್ಯತಿರಿಕ್ತ ಫಲಿತಾಂಶಗಳು ಬಂದಿರಬಹುದು. ಹೋದ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ  ಉಭಯ ತಂಡಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಒತ್ತಡವನ್ನು ನಿಭಾಯಿಸುವ ಅನುಭವ ಹೆಚ್ಚು ಇರುವ ಭಾರತ ತಂಡವು ಆ ಪಂದ್ಯದಲ್ಲಿ ಜಯಿಸಿತ್ತು. 

ಯಾವಾಗಲೂ ಭಾರತ ಮತ್ತು ಪಾಕ್ ನಡುವಣ ಪಂದ್ಯವೆಂದರೆ ಆಟಗಾರರ ಕೌಶಲಗಳ ಪೈಪೋಟಿ ಮಾತ್ರವಲ್ಲ. ಅದು ಭಾವನಾತ್ಮಕ ಸ್ಪರ್ಧೇಯೂ ಆಗಿರುತ್ತದೆ. ಆದ್ದರಿಂದ ಮಾನಸಿಕವಾಗಿ ಗಟ್ಟಿತನ ತೋರುವ ತಂಡವು ಮೇಲುಗೈ ಸಾಧಿಸುತ್ತದೆ. 

‘ಭಾರತ ಮತ್ತು ಪಾಕ್ ನಡುವಣ ಪಂದ್ಯ ಒಂದು ದೊಡ್ಡದಾದ ಸಂಗತಿ ಎನ್ನುವುದು ನಮಗೆ ಅರಿವಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ತಂಡವು ಉತ್ತಮವಾಗಿ ಆಡಿದೆ. ಭಾರತ ವಿರುದ್ಧ ಕಣಕ್ಕಿಳಿಯುವ ಮುನ್ನ ಆಡಿದ  ಐದು ಪಂದ್ಯಗಳಲ್ಲಿ ಗೆದ್ದಿತ್ತು. ಆದರೆ ಇಲ್ಲಿ ಮಾತ್ರ ಭಾರತ ತಂಡವು ನಮಗಿಂತ ಉತ್ಕೃಷ್ಠ ಮಟ್ಟದ ಕ್ರಿಕೆಟ್ ಆಡಿತು’ ಎಂದು ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪಾಕ್ ಮುಖ್ಯಕೋಚ್ ಮೈಕ್ ಹೆಸನ್ ಹೇಳಿದರು. 

‘ನಮ್ಮ ಸಾಮರ್ಥ್ಯ ಮತ್ತು ಕೌಶಲಗಳ ಮೇಲೆ ನಂಬಿಕೆಯಿದೆ’ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಹೇಳಿದ್ದರು. 

ಮೊದಲಿನಿಂದಲೂ ಶ್ರೇಷ್ಠ ವೇಗಿಗಳನ್ನು ನೀಡಿದ್ದ ಪಾಕಿಸ್ತಾನ ಇಲ್ಲಿ ಸ್ಪಿನ್ನರ್‌ಗಳ ಮೇಲೆ ಅವಲಂಬಿತವಾಯಿತು. ಅದರಲ್ಲೂ ಉಮ್ರಾನ್ ತಾರೀಖ್ ಅವರ ವಿಚಿತ್ರ ಶೈಲಿಯ ಬಗ್ಗೆ ಹೆಚ್ಚು ಮಾತುಗಳು ಕೇಳಿಬಂದವು. ಸ್ವತಃ ಸೂರ್ಯ ಅವರೇ ಶನಿವಾರದ ನೆಟ್ಸ್‌ನಲ್ಲಿ  ಉಮ್ರಾನ್ ಅವರ ‘ಪಾಝ್‌ ಬೌಲಿಂಗ್’ ಮಾದರಿಯಲ್ಲಿ ಎಸೆತಗಳನ್ನು ಹಾಕಿ ಬ್ಯಾಟರ್‌ಗಳಿಗೆ ಅಭ್ಯಾಸ ಮಾಡಿಸಿದರು.  ಆದರೆ ಪಾಕ್ ತಂಡದ ತಾಲೀಮಿನಲ್ಲಿ ಈ ರೀತಿಯ ಉತ್ಕಟತೆಯಾಗಲಿ, ಗಂಭೀರತೆಯಾಗಲೀ ಕಾಣಲಿಲ್ಲ. ‘ಹಾಲಿ ಚಾಂಪಿಯನ್’ ಮತ್ತು ಅಮೋಘ ಲಯದಲ್ಲಿರುವ ಆಟಗಾರರು ಇರುವ ತಂಡವನ್ನು ಎದುರಿಸುವ ಪೂರ್ಣ ಸಿದ್ಧತೆಗಳನ್ನು ಮಾಡುವಲ್ಲಿ ಪಾಕ್ ಎಡವಿದಂತೆ ಕಂಡಿತು. ಒಟ್ಟಾರೆಯಾಗಿ ದಶಕಗಳ ಹಿಂದೆ ಉಭಯ ತಂಡಗಳ ನಡುವೆ ಇದ್ದ ‘ಜಿದ್ದಾಜಿದ್ದಿ’ ಈಗ ಉಳಿದಿಲ್ಲವೆನಿಸುತ್ತಿದೆ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.