ADVERTISEMENT

IND vs SA T20: ಕ್ವಿಂಟನ್ ಡಿ ಕಾಕ್ ಅಬ್ಬರ; ಸೂರ್ಯ ಪಡೆಗೆ ಸೋಲಿನ ಕಹಿ

ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿ l ತಿಲಕ್ ಅರ್ಧಶತಕ

ಪಿಟಿಐ
Published 11 ಡಿಸೆಂಬರ್ 2025, 17:20 IST
Last Updated 11 ಡಿಸೆಂಬರ್ 2025, 17:20 IST
<div class="paragraphs"><p>ಕ್ವಿಂಟನ್‌ ಡಿ ಕಾಕ್‌ ಬ್ಯಾಟಿಂಗ್‌ ವೈಖರಿ</p></div>

ಕ್ವಿಂಟನ್‌ ಡಿ ಕಾಕ್‌ ಬ್ಯಾಟಿಂಗ್‌ ವೈಖರಿ

   

ಕೃಪೆ: ಪಿಟಿಐ

ಮುಲ್ಲನಪುರ: ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಹತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿ ಕೊಂಡರು. ಆದರೆ ಅವರ  ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಗುರುವಾರ ಇಲ್ಲಿ ನಡೆದ ಟಿ20 ಪಂದ್ಯ ದಲ್ಲಿ ಭಾರತದ ಎದುರು ಭರ್ಜರಿ ಜಯ ದಾಖಲಿಸಿತು. 

ADVERTISEMENT

ಕ್ವಿಂಟನ್ ಅವರ ಅಬ್ಬರಕ್ಕೆ ಆತಿಥೇಯ ಬೌಲರ್‌ಗಳು ಬಸವಳಿದರು. ಅವರು ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಅದರಲ್ಲಿ ಬಹುತೇಕ ಎಲ್ಲವೂ ಡೀಪ್‌ ಸ್ಕ್ವೇರ್‌ ಲೆಗ್‌ಗೆ ಎತ್ತಿದ್ದ ಸಿಕ್ಸರ್‌ಗಳಾಗಿ ದ್ದವು. ಒಟ್ಟು 46 ಎಸೆತಗಳಲ್ಲಿ 90 ರನ್‌ ಗಳಿಸಿದರು. ದಕ್ಷಿಣ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡಕ್ಕೆ 19.1 ಓವರ್‌ಗಳಲ್ಲಿ 162 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. 51 ರನ್‌ಗಳಿಂದ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ವೇಗಿ ಲುಂಗಿ ಎನ್‌ಗಿಡಿ (26ಕ್ಕೆ2), ಮಾರ್ಕೊ ಯಾನ್ಸೆನ್ (25ಕ್ಕೆ2), ಲುಥೊ ಸಿಪಾಮ್ಲಾ (46ಕ್ಕೆ2) ಹಾಗೂ ಒಟ್ನಿಲ್ ಬಾರ್ತಮನ್ (24ಕ್ಕೆ4) ಅವರ ಬೌಲಿಂಗ್ ದಾಳಿಗೆ ಜಯ  ಒಲಿಯಿತು. 

ಭಾರತ ತಂಡದ ತಿಲಕ್ ವರ್ಮಾ (62 ರನ್) ಅವರ ಹೋರಾಟವು ತಂಡದ ಗೆಲುವಿಗೆ ಸಾಕಾಗಲಿಲ್ಲ. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. 

ಕ್ವಿಂಟನ್ ಬೀಸಾಟ:  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಬಿಡ್ ಪಟ್ಟಿಯಲ್ಲಿರುವ ಕ್ವಿಂಟನ್   ಅವರು ಇಲ್ಲಿ ತೋರಿಸಿದ ಆಟವು ಫ್ರಾಂಚೈಸಿಗಳ ಗಮನ ಸೆಳೆದಿರಬಹುದು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತದ ನಿರ್ಧಾರವು ತಪ್ಪು ಎಂದು ಸಾಬೀತು ಮಾಡುವಲ್ಲಿ 32 ವರ್ಷದ ಕ್ವಿಂಟನ್ ಯಶಸ್ವಿಯಾದವರು. 

ಸರಣಿಯ ಮೊದಲ ಪಂದ್ಯದಲ್ಲಿ ಕ್ವಿಂಟನ್ ವಿಕೆಟ್ ಪಡೆಯುವಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಯಶಸ್ವಿಯಾಗಿ ದ್ದರು. ಆದರೆ ಈ ಪಂದ್ಯದಲ್ಲಿ ಅವರು ಬಹಳಷ್ಟು ದಂಡನೆಗೆ ಒಳಗಾದರು. ಅರ್ಷದೀಪ್ ಅವರ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಮೂಲಕ ಕ್ವಿಂಟನ್‌ ತಮ್ಮ ಬೀಸಾಟಕ್ಕೆ ಚಾಲನೆ ನೀಡಿದರು. 

ಜಸ್‌ಪ್ರೀತ್ ಬೂಮ್ರಾ ಕೂಡ ತಮ್ಮ ಎರಡನೇ ಓವರ್‌ನಲ್ಲಿ 16 ರನ್‌ ಕೊಟ್ಟರು. ಅವರ ಒಂದು ಎಸೆತವನ್ನು ರೀಜಾ ಹೆನ್ರಿಕ್ಸ್ ಸಿಕ್ಸರ್‌ಗೆತ್ತಿದರು. ನಂತರದ ಓವರ್‌ನಲ್ಲಿ ವರುಣ್ ಚಕ್ರವರ್ತಿಯ ಚುರುಕಿನ ವೇಗದ ಎಸೆತದಲ್ಲಿ ರೀಜಾ ಔಟಾದರು. ಆದರೆ ಇನ್ನೊಂದು ಬದಿಯಲ್ಲಿದ್ದ ಕ್ವಿಂಟನ್ ಮಾತ್ರ ತಮ್ಮ ಬಿರುಸಿನ ಆಟ ಮುಂದು ವರಿಸಿದ್ದರು. ಅದರಿಂದಾಗಿ ಪವರ್‌ಪ್ಲೇ ಅವಧಿಯಲ್ಲಿ ತಂಡದ ಮೊತ್ತವು 1 ವಿಕೆಟ್‌ಗೆ 53 ರನ್‌ಗಳಾಗಿದ್ದವು. 

11ನೇ ಓವರ್‌ನಲ್ಲಿ ಎರಡನೇ ಸ್ಪೆಲ್ ಹಾಕಲು ಬಂದ ಎಡಗೈ ವೇಗಿ ಅರ್ಷದೀಪ್ ಮತ್ತೆ ಕ್ವಿಂಟನ್ ಪ್ರತಾಪಕ್ಕೆ ನಡುಗಿದರು. ಅವರ ಓವರ್‌ನಲ್ಲಿ ಸಿಕ್ಸರ್ ಹೊಡೆದ ಡಿಕಾಕ್ ಅವರು ಅರ್ಷದೀಪ್ ಲಯ ತಪ್ಪಲು ಕಾರಣರಾದರು. ಸಿಂಗ್  ಅದೊಂದೇ ಓವರ್‌ ನಲ್ಲಿ ಏಳು ವೈಡ್‌ಗಳನ್ನು ಹಾಕಿದರು. ಆ ಓವರ್‌ನಲ್ಲಿ ಒಟ್ಟು 18 ರನ್‌ ಕೊಟ್ಟರು. 

ಶತಕದತ್ತ ಸಾಗಿದ್ದ ಕ್ವಿಂಟನ್ ಒಂಟಿ ರನ್ ಗಳಿಸುವ ಧಾವಂತದಲ್ಲಿ ರನ್‌ ಔಟ್ ಆದರು. ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಅವರ ಚುರುಕಿನ ಫೀಲ್ಡಿಂಗ್‌ನಿಂದಾಗಿ ಕ್ವಿಂಟನ್ ನಿರ್ಗಮಿಸಿದರು. ಬೂಮ್ರಾ ಅವರು ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿಯೂ 18 ರನ್ ಕೊಟ್ಟರು. ಅವರ ಎಸೆತಗಳಲ್ಲಿ ಫೆರೀರಾ ಅವರು ಎರಡು ಸಿಕ್ಸರ್‌ ಸಿಡಿಸಿದರು. ಇನಿಂಗ್ಸ್‌ನ ಕೊನೆಯ 10 ಓವರ್‌ಗಳಲ್ಲಿ 123 ರನ್‌ಗಳು ಪ್ರವಾಸಿ ಬಳಗದ ಖಾತೆ ಸೇರಿದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.