ADVERTISEMENT

IND vs SL: ಭಾರತ ತಿರುಗೇಟು; ಮೊದಲ ದಿನದಂತ್ಯಕ್ಕೆ ಲಂಕಾ 86/6

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 16:15 IST
Last Updated 12 ಮಾರ್ಚ್ 2022, 16:15 IST
ಟೀಮ್ ಇಂಡಿಯಾ ಆಟಗಾರರ ಸಂಭ್ರಮ
ಟೀಮ್ ಇಂಡಿಯಾ ಆಟಗಾರರ ಸಂಭ್ರಮ   

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಭಾರತ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಶ್ರೇಯಸ್ ಅಯ್ಯರ್ ಅರ್ಧಶತಕದ (92) ಹೊರತಾಗಿಯೂ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಬಳಿಕ ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಲಂಕಾ, ಮೊದಲ ದಿನದಾಟದ ಅಂತ್ಯಕ್ಕೆ 86 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಅಲ್ಲದೆ 166 ರನ್‌ಗಳ ಹಿನ್ನಡೆಯಲ್ಲಿದೆ.

ADVERTISEMENT

ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಒಟ್ಟು 338 ರನ್ನಿಗೆ 16 ವಿಕೆಟ್‌ಗಳು ಪತನಗೊಂಡಿವೆ.

ಜಸ್‌ಪ್ರೀತ್ ಬೂಮ್ರಾ ಮೂರು, ಮೊಹಮ್ಮದ್ ಶಮಿ ಎರಡು ಮತ್ತು ಅಕ್ಷರ್ ಪಟೇಲ್ ಒಂದು ವಿಕೆಟ್ ಕಬಳಿಸಿ ಲಂಕಾ ಓಟಕ್ಕೆ ಕಡಿವಾಣ ಹಾಕಿದರು.

ಏಂಜೆಲೊ ಮ್ಯಾಥ್ಯೂಸ್ (43) ಅಲ್ಪ ಪ್ರತಿರೋಧ ಒಡ್ಡಿದರು. ಕುಸಾಲ್ ಮೆಂಡಿಸ್ (2), ನಾಯಕ ದಿಮುತ್ ಕರುಣರತ್ನೆ (4), ಲಹಿರು ತಿರಿಮಣ್ಣೆ (8), ಧನಂಜಯ ಡಿ ಸಿಲ್ವ (10), ಚರಿತ ಅಸಲಂಕ (5) ವೈಫಲ್ಯ ಅನುಭವಿಸಿದರು.

ಕ್ರೀಸಿನಲ್ಲಿರುವ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ (13*) ಹಾಗೂ ಲಸಿತ್ ಎಂಬುಲದೆನಿಯಾ (0) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅಯ್ಯರ್‌ಗೆ ಪಿಂಕ್ ಬಾಲ್'ಶ್ರೇಯ'; ಭಾರತ 252ಕ್ಕೆ ಆಲೌಟ್...
ಈ ಮೊದಲು ಶ್ರೇಯಸ್ ಅಯ್ಯರ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಾನ್ವಿತ ಮೊತ್ತ ಪೇರಿಸಲು ನೆರವಾಯಿತು.

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಲ್ಲೇ ಚೆಂಡು ವಿಪರೀತ ತಿರುವು ಪಡೆಯುತ್ತಿರುವುದು ಕಂಡುಬಂತು. ಇದರ ಸಂಪೂರ್ಣ ಲಾಭ ಪಡೆದ ಲಂಕಾ ಬೌಲರ್‌ಗಳು ನಿಖರ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು.

ದಿಟ್ಟ ಹೋರಾಟ ತೋರಿದ ಅಯ್ಯರ್ ಕೇವಲ ಎಂಟು ರನ್ ಅಂತರದಿಂದ ಶತಕ ವಂಚಿತರಾದರು. ರಿಷಬ್ ಪಂತ್ ಕೂಡ (39) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಭಾರತದ ಆರಂಭ ಉತ್ತಮವಾಗಿರಲಿಲ್ಲ. ಮಯಂಕ್ ಅಗರವಾಲ್ (4) ರನೌಟ್ ಆದರು. ನಾಯಕ ರೋಹಿತ್ ಶರ್ಮಾ (15) ಮಗದೊಮ್ಮೆ ವೈಫಲ್ಯ ಅನುಭವಿಸಿದರು.

ಹನುಮ ವಿಹಾರಿ ಹಾಗೂ ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ಕಟ್ಟಿದರು. 31 ರನ್ ಗಳಿಸಿದ ವಿಹಾರಿಗೂ ಕ್ರೀಸಿನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.

71ನೇ ಶತಕದ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ 23 ರನ್ ಗಳಿಸಿ ಔಟ್ ಆದರು. ಕಳೆದ ಪಂದ್ಯದ ಹೀರೊ ರವೀಂದ್ರ ಜಡೇಜಗೆ (4) ಮಿಂಚಲು ಸಾಧ್ಯವಾಗಲಿಲ್ಲ.

ಇನ್ನೊಂದೆಡೆ ಆಕ್ರಮಣಕಾರಿ ಆಟವಾಡಿದ ಅಯ್ಯರ್ 98 ಎಸೆತಗಳಲ್ಲಿ 92 ರನ್ ಗಳಿಸಿ ಗಮನ ಸೆಳೆದರು. ಶ್ರೇಯಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಇನ್ನುಳಿದಂತೆ ಆರ್. ಅಶ್ವಿನ್ (13), ರವೀಂದ್ರ ಜಡೇಜ (4), ಮೊಹಮ್ಮದ್ ಶಮಿ (5) ರನ್ ಗಳಿಸಿದರು.

ಲಂಕಾ ಪರ ಲಸಿತ್ ಎಂಬುಲದೆನಿಯಾ ಹಾಗೂ ಪ್ರವೀಣ್ ಜಯವಿಕ್ರಮ ತಲಾ ಮೂರು ಮತ್ತು ಧನಂಜಯ ಡಿಸಿಲ್ವ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.