ADVERTISEMENT

ಕುಲದೀಪ್‌ಗೆ 5 ವಿಕೆಟ್, ವಿಂಡೀಸ್ 248ಕ್ಕೆ ಆಲೌಟ್; ಭಾರತಕ್ಕೆ 270 ರನ್ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2025, 7:34 IST
Last Updated 12 ಅಕ್ಟೋಬರ್ 2025, 7:34 IST
<div class="paragraphs"><p>ಚಿತ್ರ ಕೃಪೆ: ಬಿಸಿಸಿಐ</p></div>

ಚಿತ್ರ ಕೃಪೆ: ಬಿಸಿಸಿಐ

   

ದೆಹಲಿ: ಆತಿಥೇಯ ಭಾರತ ವಿರುದ್ಧ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ 81.5 ಓವರ್‌ಗಳಲ್ಲಿ 248 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಭಾರತ 270 ರನ್‌ಗಳ ಮುನ್ನಡೆ ದಾಖಲಿಸಿದೆ. ಅಲ್ಲದೆ ವಿಂಡೀಸ್ ತಂಡದ ಮೇಲೆ ಫಾಲೋ ಆನ್ ಹೇರಿದೆ.

ADVERTISEMENT

ಎರಡನೇ ದಿನದ ಅಂತ್ಯಕ್ಕೆ ವಿಂಡೀಸ್ 140ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇಂದು ಕೂಡ ಭಾರತೀಯ ಬೌಲರ್‌ಗಳ ನಿಖರ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ.

ಭಾರತದ ಪರ ಕುಲದೀಪ್ ಯಾದವ್ 82 ರನ್ನಿಗೆ ಐದು ವಿಕೆಟ್ ಕಿತ್ತು ಮಂಚಿದರು. ರವೀಂದ್ರ ಜಡೇಜ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಗಳಿಸಿದರು.

ವಿಂಡೀಸ್ ಪರ ಅಥನೇಜ್ 41 ಹಾಗೂ ಶಾಯಿ ಹೋಪ್ 36 ರನ್ ಗಳಿಸಿ ಔಟ್ ಆದರು. ಕೊನೆಯ ವಿಕೆಟ್‌ಗೆ ಆ್ಯಂಡರ್ಸನ್ ಪಿಲಿಫ್ (24*) ಹಾಗೂ ಜೇಡನ್ ಸೀಲ್ಸ್ (13) ಅಲ್ಪ ಪ್ರತಿರೋಧ ಒಡ್ಡಿದರು.

ಈ ಮೊದಲು ಯಶಸ್ವಿ ಜೈಸ್ವಾಲ್ (175) ಹಾಗೂ ನಾಯಕ ಶುಭಮನ್ ಗಿಲ್ (129*) ಅಮೋಘ ಶತಕದ ಬೆಂಬಲದೊಂದಿಗೆ ಭಾರತ, ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಸಾಯಿ ಸುದರ್ಶನ್ (87), ಧ್ರುವ್ ಜುರೇಲ್ (44) ಹಾಗೂ ನಿತೀಶ್ ರೆಡ್ಡಿ (43) ಸಹ ಉಪಯುಕ್ತ ಕೊಡುಗೆ ನೀಡಿದ್ದರು.

ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 140 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಈಗ ದೆಹಲಿ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್‌ಗೈಯುವ ಇರಾದೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.