ADVERTISEMENT

Women's Asia Cup Rising Stars: ಸತತ ಎರಡನೇ ಬಾರಿ ಭಾರತ ‘ಎ’ ಚಾಂಪಿಯನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2026, 12:25 IST
Last Updated 22 ಫೆಬ್ರುವರಿ 2026, 12:25 IST
   

ಬ್ಯಾಂಕಾಂಗ್‌: ತೇಜಲ್ ಹಸಬ್ನಿಸ್‌ ಅವರು ಅಜೇಯ ಅರ್ಧಶತಕ ದಾಖಲಿಸಿದರೆ ಮತ್ತು ಲೆಗ್‌ ಸ್ಪಿನ್ನರ್‌ ಪ್ರೇಮಾ ರಾವತ್‌ ಮೂರು ವಿಕೆಟ್‌ ಪಡೆದರು. ಅವರ ಆಟದ ನೆರವಿನಿಂದ ಭಾರತ ಎ ತಂಡವು ಭಾನುವಾರ ಮಹಿಳಾ ರೈಸಿಂಗ್ ಸ್ಟಾರ್ಸ್‌ ಟಿ20 ಏಷ್ಯಾ ಕಪ್‌ ಫೈನಲ್‌ನಲ್ಲಿ 46 ರನ್‌ಗಳಿಂದ ಬಾಂಗ್ಲಾದೇಶ ಎ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿತು.

2023ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲೂ ಭಾರತ ಎ ತಂಡವು ಬಾಂಗ್ಲಾ ತಂಡವನ್ನು 31 ರನ್‌ಗಳಿಂದ ಮಣಿಸಿ ಕಿರೀಟ ಗೆದ್ದಿತ್ತು. ಎಂಟು ತಂಡಗಳಿದ್ದ ಟೂರ್ನಿಯಲ್ಲಿ ಭಾರತ ಎ ತಂಡವು ಸತತ ಎರಡನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆಕೊಂಡ ಭಾರತ ಎ ತಂಡವು ತೇಜಲ್‌ (ಔಟಾಗದೇ 51;34, 4X3, 6X2) ಮತ್ತು ನಾಯಕಿ ರಾಧಾ ಯಾದವ್‌ (36;30ಎ, 4X3, 6X1) ಅವರ ಆಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 134 ರನ್‌ ಗಳಿಸಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ಎ ತಂಡವು 19.1 ಓವರ್‌ಗಳಲ್ಲಿ 88 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು.

ADVERTISEMENT

ಪ್ರೇಮಾ (13ಕ್ಕೆ 3), ಸೋನಿಯಾ ಮೆಂಧಿಯಾ (21ಕ್ಕೆ 2) ಮತ್ತು ತನುಜಾ ಕನ್ವರ್‌ (11ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಮುಂದೆ ಬಾಂಗ್ಲಾ ಬ್ಯಾಟರ್‌ಗಳು ತಡಬಡಾಯಿಸಿದರು. 20 ರನ್‌ ಗಳಿಸಿದ ಆರಂಭಿಕ ಆಟಗಾರ್ತಿ ಶಮೀಮಾ ಸುಲ್ತಾನ ಅವರು ತಂಡದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. 

ಇದಕ್ಕೂ ಮೊದಲು ಭಾರತ ಎ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. 44 ರನ್‌ಗಳಿಗೆ ಪ್ರಮುಖ ನಾಲ್ಕು ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದ್ದರು. ಈ ಹಂತದಲ್ಲಿ ತೇಜಲ್‌ ಮತ್ತು ರಾಧಾ ಅವರು ಐದನೇ ವಿಕೆಟ್‌ಗೆ 69 ರನ್‌ ಸೇರಿಸಿದ್ದರಿಂದ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು. ಬಾಂಗ್ಲಾ ಸ್ಪಿನ್ನರ್‌ ಫಾಹಿಮಾ ಖತುನ್ ನಾಲ್ಕು ವಿಕೆಟ್‌ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರು:

ಭಾರತ ಎ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 134 (ವೃಂದಾ ದಿನೇಶ್‌ 19, ತೇಜಲ್ ಹಸಬ್ನಿಸ್‌ ಔಟಾಗದೇ 51, ರಾಧಾ ಯಾದವ್‌ 36; ಫಾಹಿಮಾ ಖತುನ್ 25ಕ್ಕೆ 4)

ಬಾಂಗ್ಲಾದೇಶ ಎ: 19.1 ಓವರ್‌ಗಳಲ್ಲಿ 88 (ಶಮೀಮಾ ಸುಲ್ತಾನ 20, ಸರ್ಮಿನ್ ಸುಲ್ತಾನ 18; ಸೋನಿಯಾ ಮೆಂಧಿಯಾ 21ಕ್ಕೆ 2, ತನುಜಾ ಕನ್ವರ್‌ 11ಕ್ಕೆ 2, ಪ್ರೇಮಾ ರಾವತ್‌ 13ಕ್ಕೆ 3).

ಪಂದ್ಯದ ಆಟಗಾರ್ತಿ: ತೇಜಲ್ ಹಸಬ್ನಿಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.