ADVERTISEMENT

ಏಷ್ಯಾಕಪ್–2023 ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ: ಜಯ್ ಶಾ

ಐಎಎನ್ಎಸ್
Published 20 ಅಕ್ಟೋಬರ್ 2022, 11:03 IST
Last Updated 20 ಅಕ್ಟೋಬರ್ 2022, 11:03 IST
ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ
ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ   

ಮುಂಬೈ:ಭಾರತ ಕ್ರಿಕೆಟ್‌ ತಂಡವು ಮುಂದಿನ ಏಷ್ಯಾಕಪ್‌ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲ. ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿಯೇ ಆಯೋಜಿಸುವಂತೆ ಒತ್ತಾಯಿಸಲಾಗುವುದು ಎಂದುಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್‌ ಶಾ ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ನಡೆದ ಮಂಡಳಿಯ ಸರ್ವ ಸದಸ್ಯರ ವಾರ್ಷಿಕ ಸಭೆ ಬಳಿಕ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ (ಐಸಿಸಿ) ಭವಿಷ್ಯದ ಪ್ರವಾಸ ಯೋಜನೆಯಂತೆ ಮುಂದಿನ ವರ್ಷದ ಏಷ್ಯಾಕಪ್‌ ಟೂರ್ನಿಯು ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಬೇಕಿದೆ. ಆದರೆ, ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ನೆರೆಯ ರಾಷ್ಟ್ರಕ್ಕೆ(ಪಾಕಿಸ್ತಾನಕ್ಕೆ) ಪ್ರಯಾಣ ಕೈಗೊಳ್ಳದಿರಲು ಮತ್ತು ಟೂರ್ನಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರಲು ಬಿಸಿಸಿಐನ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

'ಏಷ್ಯಾಕಪ್‌ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವುದು ಹಿಂದೆಂದೂ ಆಗದಿರುವ ಸಂಗತಿಯೇನಲ್ಲ. ನಾವು ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದ್ದೇವೆ ಮತ್ತು ತಟಸ್ಥ ಸ್ಥಳದಲ್ಲಿಯೇ ಆಡಲು ತೀರ್ಮಾನಿಸಿದ್ದೇವೆ' ಎಂದು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಅಧ್ಯಕ್ಷರೂ ಆಗಿರುವ ಶಾ ಮಾಹಿತಿ ನೀಡಿದ್ದಾರೆ.

ಅಂದಹಾಗೆ, 2022ರ ಏಷ್ಯಾಕಪ್‌ ಟೂರ್ನಿಯು ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ಆ ದೇಶದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಸ್ಥಿತಿಯಿಂದಾಗಿ ದುಬೈನಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಶ್ರೀಲಂಕಾ ತಂಡವೇ ಪ್ರಶಸ್ತಿ ಗೆದ್ದಿತ್ತು ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.