ADVERTISEMENT

ವಯಸ್ಸಾಗುವುದು ನಿಶ್ಚಿತ, ದೊಡ್ಡವರಾಗುವುದು ಮಾತ್ರ ಆಯ್ಕೆ: ರಜಾಕ್‌ಗೆ ಹಿರಿಯರ ಚಾಟಿ

ಏಜೆನ್ಸೀಸ್
Published 6 ಡಿಸೆಂಬರ್ 2019, 10:06 IST
Last Updated 6 ಡಿಸೆಂಬರ್ 2019, 10:06 IST
   

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆಟಗಾರ ಜಸ್‌ಪ್ರೀತ್ ಬೂಮ್ರಾ ಕುರಿತು ‘ಬೇಬಿ ಬೌಲರ್‌’ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಜ್‌ ಅವರತ್ತ ಹಿರಿಯ ಕ್ರಿಕೆಟಿಗರು ಚಾಟಿ ಬೀಸಿದ್ದಾರೆ.

ಕ್ರೀಡಾ ವೆಬ್‌ಸೈಟ್‌ವೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ಬೂಮ್ರಾ ಬಗ್ಗೆ ಮಾತನಾಡಿದ್ದ 40 ವರ್ಷದ ರಜಾಕ್. ‘ನಾನು ಗ್ಲೆನ್ ಮೆಕ್‌ಗ್ರಾ ಅವರಂತಹ ಶ್ರೇಷ್ಠ ಬೌಲರ್‌ಗಳನ್ನು ಎದುರಿಸಿದ್ದೆ. ಅವರಿಗೆ ಹೋಲಿಕೆ ಮಾಡಿದರೆ ನನ್ನ ಮುಂದೆಬೂಮ್ರಾ ಬೇಬಿ ಬೌಲರ್’ ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವಭಾರತ ತಂಡದ ಮಾಜಿ ಆಟಗಾರ ಆಕಾಶ್‌ ಚೋಪ್ರಾ,‘ವಯಸ್ಸಾಗುವುದು ನಿಶ್ಚಿತ, ದೊಡ್ಡವರಾಗುವುದು ಮಾತ್ರ ಆಯ್ಕೆ ಎಂಬುದಕ್ಕೆ ಇದೊಂದು ಉದಾಹರಣೆ’ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಭಾರತದ ಮತ್ತೊಬ್ಬ ಕ್ರಿಕೆಟಿಗ ಪಠಾಣ್‌ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸದೆ, ‘ಇರ್ಫಾನ್‌ ನಂತಹ ಬೌಲರ್‌ ನಮ್ಮ ಗಲ್ಲಿ–ಗಲ್ಲಿಗಳಲ್ಲಿ ಸಿಗುತ್ತಾರೆ’ ಎಂದು ಹೇಳಿದ್ದರು. ಹಾಗೆ ಹೇಳಿದ್ದವರ ವಿರುದ್ಧ ಪ್ರತಿಬಾರಿ ಆಡಿದಾಗಲೂ, ಅವರ ಕಿವಿರುಗಳನ್ನುಗಲ್ಲಿ ಬೌಲರ್‌ ಕತ್ತರಿಸಿದ್ದ. ಇಂತಹ ಕೆಲಸಕ್ಕೆ ಬಾರದ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅವುಗಳನ್ನು ಓದಿ, ನಕ್ಕು ಸುಮ್ಮನಾಗಿರಿ ಎಂದು ಟ್ವೀಟ್‌ ಮಾಡಿದ್ದಾರೆ.

2004ರಲ್ಲಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ ಆ ದೇಶದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌, ಇರ್ಫಾನ್‌ ಕುರಿತು ಹಗುರವಾಗಿ ಮಾತನಾಡಿದ್ದರು. ‘ನಿಮ್ಮ ಇರ್ಫಾನ್‌ನಂತ ಬೌಲರ್‌ಗಳು ಪಾಕಿಸ್ತಾನದ ಗಲ್ಲಿ–ಗಲ್ಲಿಗಳಲ್ಲಿ ಸಾಕಷ್ಟು ಜನರು ಇದ್ದಾರೆ. ಪಠಾಣ್‌ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ’ ಎಂದು ಹೇಳಿದ್ದರು.

ಆ ಹೇಳಿಕೆ ನೀಡಿ ಎರಡು ವರ್ಷ ಕಳೆಯುವುದರೊಳಗೆ ಕರಾಚಿಯಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ, ಪಾಕಿಸ್ತಾನ ವಿರುದ್ಧ ಇರ್ಫಾನ್‌ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಸಾಧನೆ ಮಾಡಿದ್ದರು. ಹೀಗಾಗಿ ಮಿಯಂದಾದ್‌ ಹೇಳಿಕೆಯನ್ನು ಉಲ್ಲೇಖಿಸಿಯೇ ಪಠಾಣ್‌ ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿದೆ.

ರಜಾಕ್‌ ಹೇಳಿಕೆಯನ್ನು ಸಾಕಷ್ಟು ಜನರು ಖಂಡಿಸಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಟ್ರೋಲ್‌ ಮಾಡಲಾಗಿದ್ದು, ಆ ಹೇಳಿಕೆಯನ್ನು ‘ಜೋಕ್‌ ಆಫ್ ದಿ ಇಯರ್‌’ ಎಂದು ಕಿಚಾಯಿಸಲಾಗಿದೆ.

ಸದ್ಯ ಗಾಯಾಳುವಾಗಿರುವ ಜಸ್‌ಪ್ರೀತ್‌ ಬೂಮ್ರಾ ಏಕದಿನ ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹಾಗೂ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.