ADVERTISEMENT

IML | ಯುವಿ 7 ಸಿಕ್ಸರ್; ಆಸೀಸ್ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2025, 7:34 IST
Last Updated 14 ಮಾರ್ಚ್ 2025, 7:34 IST
<div class="paragraphs"><p>ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್</p></div>

ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್

   

(ಚಿತ್ರ ಕೃಪೆ/x@imlt20official)

ರಾಯ್‌ಪುರ: ಯುವರಾಜ್ ಸಿಂಗ್ ಅವರ ಬಿರುಸಿನ ಅರ್ಧಶತಕದ (59) ನೆರವಿನಿಂದ ಇಂಡಿಯಾ ಮಾಸ್ಟರ್ಸ್ ತಂಡವು ಇಲ್ಲಿ ನಡೆಯುತ್ತಿರುವ ಚೊಚ್ಚಲ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ADVERTISEMENT

ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ವಿರುದ್ಧ 94 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದ ಇಂಡಿಯಾ ಮಾಸ್ಟರ್ಸ್, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಮಾಸ್ಟರ್ಸ್, ಏಳು ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆಸೀಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಯುವಿ, ಕೇವಲ 30 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 59 ರನ್ ಗಳಿಸಿ ಅಬ್ಬರಿಸಿದರು.

ನಾಯಕ ಸಚಿನ್ ತೆಂಡೂಲ್ಕರ್ 42 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. 30 ಎಸೆತಗಳನ್ನು ಎದುರಿಸಿದ ಸಚಿನ್, ಏಳು ಬೌಂಡರಿಗಳನ್ನು ಬಾರಿಸಿದರು.

ಸ್ಟುವರ್ಟ್ ಬಿನ್ನಿ 36, ಯೂಸುಫ್ ಪಠಾಣ್ 23 ಹಾಗೂ ಇರ್ಫಾನ್ ಪಠಾಣ್ ಅಜೇಯ 19 ರನ್‌ಗಳ ಕಾಣಿಕೆ ನೀಡಿದರು.

ಬಳಿಕ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್, ಬ್ಯಾಟಿಂಗ್ ವೈಫಲ್ಯವನ್ನು ಕಂಡಿತ್ತಲ್ಲದೆ 18.1 ಓವರ್‌ಗಳಲ್ಲಿ 126 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಶೇನ್ ವಾಟ್ಸನ್ 5, ಶಾನ್ ಮಾರ್ಷ್ 21 ಹಾಗೂ ಬೆನ್ ಕಟ್ಟಿಂಗ್ 39 ರನ್ ಗಳಿಸಿದರು.

ಇಂಡಿಯಾ ಮಾಸ್ಟರ್ಸ್ ಪರ ಶಹಬಾಜ್ ನದೀಂ ನಾಲ್ಕು ಮತ್ತು ವಿನಯ್ ಕುಮಾರ್ ಹಾಗೂ ಇರ್ಫಾನ್ ಪಠಾಣ್ ತಲಾ ಎರಡು ವಿಕೆಟ್ ಗಳಿಸಿದರು.

ಇಂದು (ಶುಕ್ರವಾರ) ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಮಾಸ್ಟರ್ಸ್ ಹಾಗೂ ವೆಸ್ಟ್‌ಇಂಡೀಸ್ ಮಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಟ್ರೋಫಿಗಾಗಿ ಇಂಡಿಯಾ ಮಾಸ್ಟರ್ಸ್ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.