ADVERTISEMENT

ವಿಲಿಯರ್ಸ್‌ಗೆ ‘ಏಲಿಯನ್ ಡಿ ವಿಲಿಯರ್ಸ್’ ಎಂದು ಹೆಸರಿಟ್ಟ ಕೊಹ್ಲಿ: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 10:40 IST
Last Updated 13 ಅಕ್ಟೋಬರ್ 2020, 10:40 IST
ಎಬಿ ಡಿ ವಿಲಿಯರ್ಸ್‌ ಬ್ಯಾಟಿಂಗ್‌ ವೈಖರಿ (ಟ್ವಿಟರ್ ಚಿತ್ರ)
ಎಬಿ ಡಿ ವಿಲಿಯರ್ಸ್‌ ಬ್ಯಾಟಿಂಗ್‌ ವೈಖರಿ (ಟ್ವಿಟರ್ ಚಿತ್ರ)   

ಶಾರ್ಜಾ: ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ಅಮೋಘ ಗೆಲುವು ಸಾಧಿಸಿದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಡ್ರೆಸ್ಸಿಂಗ್‌ ರೂಂನಲ್ಲಿ ಸಂಭ್ರಮಿಸಿರುವ ಹಾಗೂ ಜಯದ ಬಗ್ಗೆ ಮಾತನಾಡಿರುವ ವಿಡಿಯೊ ಇದೀಗ ವೈರಲ್‌ ಆಗಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ಆರ್‌ಸಿಬಿ 2 ವಿಕೆಟ್‌ ಕಳೆದುಕೊಂಡು 194 ರನ್ ಗಳಿಸಿತ್ತು. ಈ ಗುರಿ ಎದುರು ಕೆಕೆಆರ್ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 112 ರನ್‌ ಗಳಿಸಿತ್ತು. ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದ ಎಬಿ ಡಿ ವಿಲಿಯರ್ಸ್ 33 ಎಸೆತಗಳಲ್ಲಿ ಅಜೇಯ 73 ರನ್‌ ಬಾರಿಸಿದ್ದರು. ಆರು ಸಿಕ್ಸರ್‌ಗಳು ಎಬಿ ಡಿ ಬ್ಯಾಟ್‌ನಿಂದ ಸಿಡಿದಿದ್ದವು. ಅದರಲ್ಲಿ ಎರಡು ಚೆಂಡು ಕ್ರೀಡಾಂಗಣದ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದ ಕಾರುಗಳ ಮೇಲೆ ಬಿದ್ದಿದ್ದವು.

ಆರ್‌ಸಿಬಿ ತನ್ನ ಟ್ವಿಟರ್ ಮತ್ತು ಫೇಸ್‌ಬುಕ್‌ ಪುಟಗಳಲ್ಲಿ, ‘ಸಾಕಷ್ಟು ನಗು, ಕಾರ್ಯವಿಧಾನದಲ್ಲಿ ನಂಬಿಕೆ, ಪರಿಶ್ರಮ, ಏಲಿಯನ್‌ ಡಿ ವಿಲಿಯರ್ಸ್... ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಡ್ರೆಸ್ಸಿಂಗ್‌ ರೂಮ್‌ನಿಂದ ಹೋಗುವ ಕೆಲವು ಮಾತುಗಳು’ ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದೆ.

ADVERTISEMENT

ನಾಯಕ ವಿರಾಟ್‌ ಕೊಹ್ಲಿ,ಸ್ಫೋಟಕ ಬ್ಯಾಟಿಂಗ್‌ ನಡೆಸಿದವಿಲಿಯರ್ಸ್‌ ಅವರನ್ನು ‘ಏಲಿಯನ್‌ ಡಿ ವಿಲಿಯರ್ಸ್’ ಎಂದಿದ್ದಾರೆ. ‘ಈ ಪ್ಲಾಟ್‌ಫಾರ್ಮ್‌ನಲ್ಲಿ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರವೇ ರನ್‌ ಗಳಿಸಲು ಸಾಧ್ಯ. ಅದು ನಾನು ಮತ್ತು ವಿಲಿಯರ್ಸ್‌’ ಎಂದು ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಚಟಾಕಿ ಹಾರಿಸಿದ್ದಾರೆ. ಚಾಹಲ್‌ ಈ ಪಂದ್ಯದಲ್ಲಿ 4 ಓವರ್‌ ಬೌಲಿಂಗ್‌ ಮಾಡಿ, ಕೇವಲ 12 ರನ್‌ ನೀಡಿದ್ದರು.

ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವಿಲಿಯರ್ಸ್‌ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ(22ನೇ ಬಾರಿ) ಈ ಸಾಧನೆ ಮಾಡಿದ ಆಟಗಾರಎನಿಸಿದರು. ಕ್ರಿಸ್‌ ಗೇಲ್‌ (21 ಸಲ) ಮತ್ತು ರೋಹಿತ್‌ ಶರ್ಮಾ (18 ಬಾರಿ) ಕ್ರಮವಾಗಿಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.

ಇದರೊಂದಿಗೆ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿರುವ ಆರ್‌ಸಿಬಿ,ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಕೆಕೆಆರ್‌ 7 ಪಂದ್ಯಗಳಲ್ಲಿ 4ನೇ ಸೋಲು ಕಂಡು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮೊದಲೆರಡು ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.